ಹವಾಮಾನ ಇಲಾಖೆ ನೀಡಿದ ಮಾಹಿತಿಗಳ ಪ್ರಕಾರ ಉತ್ತರ ಕನ್ನಡ ಜಿಲ್ಲೆಯಲ್ಲಿ ಜುಲೈ 20ರಂದು ಭಾರೀ ಪ್ರಮಾಣದ ಮಳೆಯಾಗಲಿದೆ. ಬೆಳಗ್ಗೆ 5.30ರಿಂದ ಶುರುವಾಗುವ ಮಳೆ ಮರುದಿನವೂ ಮುಂದುವರೆಯಲಿದೆ.
ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವೂ ಮಳೆ ಮಾಹಿತಿ ನೀಡಿದೆ. ಅಘನಾಶಿನಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಬಗ್ಗೆ ಕೇಂದ್ರಿಯ ಜಲ ಆಯೋಗ ತುರ್ತು ಸಂದೇಶ ರವಾನಿಸಿದೆ. ಹೀಗಾಗಿ ಜುಲೈ 20ರಂದು ಹಠಾತ್ ಆಗಿ ಪ್ರವಾಹ ಸೃಷ್ಠಿಯಾಗುವ ಲಕ್ಷಣಗಳಿವೆ. ಅಲ್ಲಲ್ಲಿ ಸಣ್ಣಪುಟ್ಟ ಭೂ ಕುಸಿತವನ್ನು ಅಲ್ಲಗಳೆಯುವ ಹಾಗಿಲ್ಲ. ಈ ಅವಧಿಯಲ್ಲಿ ಜೋರು ಗಾಳಿಯೂ ಬೀಸುವುದರಿಂದ ಗಿಡ-ಮರಗಳು ನೆಲಕ್ಕೆ ಬೀಳುವ ಸಾಧ್ಯತೆಗಳಿವೆ. ಪ್ರತಿಯೊಬ್ಬರು ಮುನ್ನಚ್ಚರಿಕೆವಹಿಸುವುದು ಸೂಕ್ತ ಎಂದು ಉತ್ತರ ಕನ್ನಡ ಜಿಲ್ಲಾಡಳಿತ ಕಳಕಳಿಯ ಮಾಹಿತಿ ರವಾನಿಸಿದೆ.
`ಯಾವುದೇ ಕಾರಣಕ್ಕೂ ಸಾರ್ವಜನಿಕರು ಸಮುದ್ರ ಪ್ರದೇಶಕ್ಕೆ ಹೋಗಬಾರದು. ನದಿ, ನೀರು ಹಾಗೂ ಅಪಾಯಕಾರಿ ಸ್ಥಳಗಳಿಂದ ದೂರವಿರಬೇಕು’ ಎಂದು ಸೂಚಿಸಲಾಗಿದೆ. `ಮುಖ್ಯವಾಗಿ ನದಿ ತೀರದ ಬಳಿ ವಾಸಿಸುವವರು ಸುರಕ್ಷಿತ ಸ್ಥಳಕ್ಕೆ ತೆರಳಬೇಕು. ಗುಡ್ಡದ ಇಳಿಜಾರಿನ ಪ್ರದೇಶದಲ್ಲಿ ವಾಸಿಸುವರು ಕೂಡಾ ಮಳೆಯ ತೀವ್ರತೆಯನುಸಾರ ಸುರಕ್ಷತಾ ಸ್ಥಳಕ್ಕೆ ಸ್ಥಳಾಂತರಗೊಳ್ಳಬೇಕು. ಮಕ್ಕಳ ಬಗ್ಗೆ ಕಾಳಜಿವಹಿಸಬೇಕು’ ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ.
ಜಿಲ್ಲೆಯ ಜನ ತಮ್ಮ ಕಷ್ಟಗಳ ಬಗ್ಗೆ 08382-229857ಗೆ ಫೋನ್ ಮಾಡಿ ಹೇಳಲು ಅವಕಾಶವಿದೆ. ವಾಟ್ಸಪ್ ಸಂಖ್ಯೆ 9483511015ಗೆ ಸಹ ಮಾಹಿತಿ ನೀಡಬಹುದು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷೆಯೂ ಆಗಿರುವ ಕೆ ಲಕ್ಷ್ಮೀಪ್ರಿಯಾ ಅವರು ಹೇಳಿದ್ದಾರೆ.
Discussion about this post