`ಬಿಜೆಪಿ ಬೆಂಬಲಿತ ಜನಪ್ರತಿನಿಧಿಗಳ ಮತಪಡೆದು ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಗಣಪತಿ ಉಳ್ವೇಕರ್ ಈವರೆಗೂ ಮತದಾರರ ಮನದಾಳ ಆಲಿಸಿಲ್ಲ. ಆಯ್ಕೆಯಾದ ದಿನದಿಂದ ಈವರೆಗೂ ಅವರು ಒಮ್ಮೆಯೂ ಯಲ್ಲಾಪುರಕ್ಕೆ ಬರಲಿಲ್ಲ’ ಎಂದು ಬಿಜೆಪಿ ಯಲ್ಲಾಪುರ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸೋಮೇಶ್ವರ ನಾಯ್ಕ ಹೇಳಿದ್ದಾರೆ.
`ಗಣಪತಿ ಉಳ್ವೇಕರ್ ಅವರು ಕಟ್ಟಾ ಬಿಜೆಪಿಗರು. ನಾವು ಸಹ ಕಟ್ಟಾ ಬಿಜೆಪಿಗರಾಗಿದ್ದು, ವಿಧಾನ ಪರಿಷತ್ ಚುನಾವಣೆ ವೇಳೆ ಅವರ ಗೆಲುವಿಗಾಗಿ ಒಗ್ಗಟ್ಟಿನಿಂದ ಕೆಲಸ ಮಾಡಿದ್ದೇವೆ. ಆದರೆ, ಗೆದ್ದ ನಂತರ ಗಣಪತಿ ಉಳ್ವೇಕರ್ ಒಮ್ಮೆಯೂ ತಮ್ಮನ್ನು ಭೇಟಿ ಮಾಡಿಲ್ಲ. ಮತದಾರರಿಗೆ ಕೃತಜ್ಞತೆಯನ್ನು ಸಹ ಸಲ್ಲಿಸಿಲ್ಲ. ಉಳ್ವೇಕರ್ ಅವರು ಫೋನಿಗೂ ಸಿಗಲ್ಲ. ಭೇಟಿಯಾಗಲು ಬರುವುದಿಲ್ಲ’ ಎಂದು ಅಸಮಧಾನವ್ಯಕ್ತಪಡಿಸಿದ್ದಾರೆ.
`ಜನಪ್ರತಿನಿಧಿಗಳ ಮತಪಡೆದು ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಗಣಪತಿ ಉಳ್ವೇಕರ್ ಅವರಿಂದ ಕ್ಷೇತ್ರದ ಜನರಿಗೆ ಕಿಂಚಿತ್ತು ಪ್ರಯೋಜನವಾಗಿಲ್ಲ. ಶಾಸಕರಾದ ಅವರಿಗೆ ಮಾಡಲು ಸಾಕಷ್ಟು ಕೆಲಸವಿದ್ದು, ಅಭಿವೃದ್ಧಿ ವಿಷಯವಾಗಿ ಅವರಿಂದ ಯಾವುದೇ ಕೊಡುಗೆ ಸಿಕ್ಕಿಲ್ಲ’ ಎಂದು ಸೋಮೇಶ್ವರ ನಾಯ್ಕ ಕಿಡಿಕಾರಿದ್ದಾರೆ. `ಅಧಿಕಾರ ಬಂದ ನಂತರ ಮನುಷ್ಯ ಬದಲಾಗುತ್ತಾನೆ ಎನ್ನುವುದಕ್ಕೆ ಗಣಪತಿ ಉಳ್ವೇಕರ್ ಉದಾಹರಣೆಯಾಗಿದ್ದಾರೆ. ಮೊದಲು ಸಭ್ಯ ರಾಜಕಾರಣಿಯಾಗಿದ್ದ ಅವರು ಇದೀಗ ಯಾರ ಮಾತು ಆಲಿಸುತ್ತಿಲ್ಲ’ ಎಂದು ಕಿಡಿಕಾರಿದ್ದಾರೆ.
`ಗಣಪತಿ ಉಳ್ವೇಕರ್ ಅವರು ಒಮ್ಮೆಯಾದರೂ ಯಲ್ಲಾಪುರಕ್ಕೆ ಬರಬೇಕಿತ್ತು. ಇಲ್ಲಿರುವ ತಳಹಂತದ ಜನಪ್ರತಿನಿಧಿಗಳು ಎದುರಿಸುತ್ತಿರುವ ಸಮಸ್ಯೆ ಆಲಿಸಬೇಕಿತ್ತು. ಬಿಜೆಪಿ ಕಾರ್ಯಕರ್ತರನ್ನು ವಿಶ್ವಾಸಕ್ಕೆಪಡೆದು ಅವರು ಕೆಲಸ ಮಾಡಬೇಕಿತ್ತು. ಆದರೆ, ಇದ್ಯಾವುದು ನಡೆಯುತ್ತಿಲ್ಲ’ ಎಂದು ಸ್ವಪಕ್ಷದ ಹಿರಿಯ ರಾಜಕಾರಣಿ ವಿರುದ್ಧವೇ ಸೋಮೇಶ್ವರ ನಾಯ್ಕ ಮಾತನಾಡಿದ್ದಾರೆ.
Discussion about this post