ಕಾರವಾರದ ಪಿಕಳೆ ರಸ್ತೆಯಲ್ಲಿ ಮರ ಬಿದ್ದು ಮಹಿಳೆ ಸಾವನಪ್ಪಿದ್ದು, ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಕಂಬನಿ ಮಿಡಿದಿದ್ದಾರೆ. `ಅಪಾಯಕಾರಿ ಮರಗಳನ್ನು ಕೂಡಲೇ ತೆರವುಗೊಳಿಸಿ. ಜನರ ಜೀವ ಉಳಿಸಿ’ ಎಂದು ಅವರು ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.
ನಗರದ ಜನ ವಸತಿ ಪ್ರದೇಶದಲ್ಲಿ ದೊಡ್ಡ ದೊಡ್ಡ ಮರಗಳಿವೆ. ಆಗಾಗ ಮರದ ರೆಂಬೆ-ಕೊoಬೆಗಳು ನೆಲಕ್ಕೆ ಬಿದ್ದು ಅಪಾಯವಾಗುತ್ತಿದೆ. ಹೀಗಾಗಿ ಅಪಾಯಕಾರಿ ಮರಗಳನ್ನು ಗುರುತಿಸಿ ಅವುಗಳನ್ನು ತೆರವು ಮಾಡುವುದು ಅನಿವಾರ್ಯ’ ಎಂದು ಗಣಪತಿ ಉಳ್ವೇಕರ್ ಹೇಳಿದ್ದಾರೆ.
`ನಗರದಲ್ಲಿ ಕೆಲ ಡೋಂಗಿ ಪರಿಸರವಾದಿಗಳಿದ್ದಾರೆ. ವೈಜ್ಞಾನಿಕ ರೀತಿಯಲ್ಲಿ ಸಣ್ಣ-ಪುಟ್ಟ ರೆಂಬೆ ಕಡಿದರೂ ಕೆಲ ಪರಿಸರವಾದಿಗಳು ತಕರಾರು ಸಲ್ಲಿಸುತ್ತಾರೆ. ಹೀಗಾಗಿ ಮಲ್ಲಾಪುರದ ಮಹಿಳೆಯ ಸಾವಿಗೆ ಡೋಂಗಿ ಪರಿಸರವಾದಿಗಳೇ ಕಾರಣ’ ಎಂದು ಗಣಪತಿ ಉಳ್ವೇಕರ್ ದೂರಿದ್ದಾರೆ. `ನಗರಸಭೆ ಹಾಗೂ ಅರಣ್ಯ ಇಲಾಖೆ ಜಂಟಿ ಸರ್ವೇ ಮಾಡಿ ನಗರದಲ್ಲಿರುವ ಅಪಾಯಕಾರಿ ಮರ ತೆರವು ಮಾಡಬೇಕು. ಅನಾಹುತಕ್ಕೆ ಕಾರಣವಾಗಬಹುದಾದ ಮರ ತೆರವಿಗೂ ಮುನ್ನ ಅಗತ್ಯ ಅನುಮತಿಯನ್ನುಪಡೆಯಬೇಕು’ ಎಂದವರು ಆಗ್ರಹಿಸಿದ್ದಾರೆ.
ಕೆಲ ದಿನಗಳ ಹಿಂದೆ ಬಸ್ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಶಾಸಕ ಸತೀಶ್ ಸೈಲ್ ನಗರದಲ್ಲಿರುವ ಅಪಾಯಕಾರಿ ಮರಗಳ ಬಗ್ಗೆ ವಿವರಿಸಿದ್ದರು. ಅಪಾಯತಡೆಯಲು ನಗರದಲ್ಲಿರುವ ಪರಿಸರವಾದಿಗಳು ಸೂಕ್ತ ಸಲಹೆ ನೀಡಬೇಕು ಎಂದಿದ್ದರು. ಸತೀಶ್ ಸೈಲ್ ವಕೀಲರೊಬ್ಬರ ಹೆಸರನ್ನು ಹೇಳಿ `ಮರ ಕಟಾವಿಗೆ ತಕರಾರು ಸಲ್ಲಿಸಬೇಡಿ’ ಎಂದಿದ್ದರು.
Discussion about this post