ಕಾರವಾರ ನಗರಸಭಾ ವ್ಯಾಪ್ತಿಯಲ್ಲಿನ ಅಪಾಯಕಾರಿ ಮರ ಕಟಾವಿಗೆ ಮುಹೂರ್ತ ನಿಗಧಿಯಾಗಿದೆ. ಸವಿತಾ ಸರ್ಕಲ್ ಬಳಿಯಿರುವ ಮರಕ್ಕೆ ಅಧಿಕಾರಿಗಳು ಪೂಜೆ ಸಲ್ಲಿಸಿ, ಆ ಮರವನ್ನು ತೆರವು ಮಾಡಿದ್ದಾರೆ.
ಶಾಸಕ ಸತೀಶ್ ಸೈಲ್ ಸಮ್ಮುಖದಲ್ಲಿ ಸೋಮವಾರದಿಂದ ಮರ ಕಟಾವು ಕಾರ್ಯ ಶುರುವಾಗಿದ್ದು, ಶನಿವಾರದ ಒಳಗೆ ಎಲ್ಲಾ ಅಪಾಯಕಾರಿ ಮರಗಳನ್ನು ನೆಲಕ್ಕುರುಳಿಸುವಂತೆ ಶಾಸಕ ಸತೀಶ್ ಸೈಲ್ ಸೂಚನೆ ನೀಡಿದ್ದಾರೆ. ಭಾನುವಾರ ಪಿಕಳೆ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರಿನ ಮೇಲೆ ಮರ ಬಿದ್ದು, ಕಾರಿನೊಳಗಿದ್ದ ಮಲ್ಲಾಪುರದ ಮಹಿಳೆ ಸಾವನಪ್ಪಿದ್ದರು. ಇದಕ್ಕಿಂತ ಒಂದು ವಾರ ಮುಂಚಿತವಾಗಿ ಸತೀಶ್ ಸೈಲ್ ಅಪಾಯಕಾರಿ ಮರಗಳ ತೆರವಿಗೆ ನಿರ್ಧರಿಸಿದ್ದರಾದರೂ ಆ ಕಾರ್ಯ ಮುಂದುವರೆದಿರಲಿಲ್ಲ. ಇದೀಗ ಮರ ತೆರವಿಗೆ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
`ಅಪಾಯಕಾರಿ ಮರಗಳ ತೆರವು ಕುರಿತಂತೆ ನಾನು ಎಚ್ಚರಿಕೆ ನೀಡುತ್ತಲೇ ಇದ್ದರೂ ಯಾರು ತಲೆಕೆಡಿಸಿಕೊಂಡಿಲ್ಲ. ಹೀಗಾಗಿ ಮಹಿಳೆ ಮೃತಪಟ್ಟರು’ ಎಂದು ಸತೀಶ್ ಸೈಲ್ ಬೇಸರವ್ಯಕ್ತಪಡಿಸಿದರು. `ಕಾರವಾರ ನಗರಸಭಾ ವ್ಯಾಪ್ತಿಯಲ್ಲಿ ಈಗಾಗಲೇ 12ರಿಂದ 18 ಅಪಾಯಕಾರಿಗಳ ಮರಗಳನ್ನು ಗುರುತಿಸಿಸಲಾಗಿದೆ. ಈ ಮರಗಳನ್ನು ತೆರವುಗೊಳಿಸುವುದು ಮಾತ್ರವಲ್ಲದೇ ಸಾರ್ವಜನಿಕರಿಂದ ಬೇಡಿಕೆ ಬರುವ ಅಪಾಯಕಾರಿ ಮರಗಳನ್ನು ಸಹ ನಿಯಮಾನುಸಾರ ಪರಿಶೀಲಿಸಿ ತೆರವು ಮಾಡಬೇಕು’ ಎಂದು ಅವರು ಸೂಚಿಸಿದರು.
`ಈಗ ತೆರವು ಮಾಡಿದ ಮರಗಳ ಬದಲಿಗೆ ಮುಂದಿನ ವಾರ 1:10 ಅನುಪಾತದ ಅಡಿ ಗಿಡ ನೆಡುವ ಕಾರ್ಯಕ್ರಮ ರೂಪಿಸಬೇಕು. ಈ ಪ್ರಮಾಣ 1:20ರ ಅನುಪಾತಕ್ಕೆ ಹೆಚ್ಚಿಸುವ ಕುರಿತಂತೆ ಎಲ್ಲಾ ಸ್ವಯಂ ಸೇವಾ ಸಂಘಟನೆಗಳು ವಿಶೇಷ ಕಾಳಜಿವಹಿಸಬೇಕು’ ಎಂದರು. ಇದರೊಂದಿಗೆ `ನಗರಸಭಾ ವ್ಯಾಪ್ತಿಯ ಕೋಣೆನಾಲದ ಒತ್ತುವರಿಯನ್ನು ಕೂಡಲೇ ತೆರವು ಮಾಡಿ’ ಎಂದು ಆದೇಶಿಸಿದರು. `ಕೋಣೆನಾಲಕ್ಕೆ ಗೃಹ ಬಳಕೆಯ ನೀರು ಮತ್ತು ಶೌಚಾಲಯದ ತ್ಯಾಜ್ಯ ಬಿಡುವವರ ವಿರುದ್ಧ ಕ್ರಮ ಜರುಗಿಸಬೇಕು. ಅವರಿಗೆ ವಿದ್ಯುತ್ ಮತ್ತು ನೀರಿನ ಸಂಪರ್ಕವನ್ನು ಕಡಿತಗೊಳಿಸಬೇಕು’ ಎಂದು ನಿರ್ದೇಶನ ನೀಡಿದರು.
ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ಡಿಎಫ್‌ಓ ರವಿಶಂಕರ್, ತಹಸೀಲ್ದಾರ್ ನಿಶ್ಚಲ್ ನರೋನ್ಹ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಮಾಲಾ ಹುಲಸ್ವಾರ್, ಕಾರವಾರ ನಗರ ಠಾಣೆಯ ಇನ್ಸ್ಪೆಕ್ಟರ್ ರಮೇಶ ಹೂಗಾರ್ ಇತರರಿದ್ದರು.
Discussion about this post