ಮೊಬೈಲ್ ಸಿಗ್ನಲ್’ಗಾಗಿ ಹುಡುಕಾಡಿ ವೈಫೈ ಸಿಗ್ನಲ್ ಸಿಕ್ಕ ಖುಷಿ ಅನುಭವಿಸಿ ಮನೆಗೆ ಮರಳುತ್ತಿದ್ದ ವಸಂತ ಸಿದ್ದಿ ಮೇಲೆ ವಜ್ರಳ್ಳಿಯಲ್ಲಿ ಹಲ್ಲೆ ನಡೆದಿದೆ. ಹಲ್ಲೆ ನಡೆಸಿದ ಸುಭಾಷ್ ಸಿದ್ದಿ ವಿರುದ್ಧ ಯಲ್ಲಾಪುರ ಪೊಲೀಸ್ ಠಾಣೆಯ ಮಹೇಶ ಪಾಟೀಲ್ ಅವರು ತನಿಖೆ ಶುರು ಮಾಡಿದ್ದಾರೆ.
ಪೊಲೀಸರು ದಾಖಲಿಸಿಕೊಂಡ ದೂರಿನ ಪ್ರಕಾರ, ಕಾಲೇಜು ವಿದ್ಯಾರ್ಥಿಯಾಗಿರುವ ವಸಂತ ಸಿದ್ದಿ ವಜ್ರಳ್ಳಿಯ ಕಬ್ಬನಕುಂಬ್ರಿಯವರು. ಮನೆಯಲ್ಲಿ ಮೊಬೈಲ್ ಸಿಗ್ನಲ್ ಸಿಗದೇ ಅವರು ಪರದಾಡುತ್ತಿದ್ದರು. ಜುಲೈ 7ರ ಸಂಜೆ ಫೋನ್ ಮಾಡುವುದಕ್ಕಾಗಿ ಅವರು ಅಲೆದಾಡುತ್ತಿದ್ದಾಗ ಎಲ್ಲಿಯೂ ನೆಟ್‌ವರ್ಕ ಸಿಗಲಿಲ್ಲ. ಹೀಗಾಗಿ ಅದೇ ಊರಿನ ಈಶ್ವರ ಗಾಂವ್ಕರ್ ಅವರ ಮನೆಗೆ ಹೋಗಿ ತಮ್ಮ ಮೊಬೈಲಿಗೆ ವೈಫೈ ಕನೆಕ್ಟ್ ಮಾಡಿದರು.
ವೈಫೈ ಕಾಲಿಂಗ್ ಮೂಲಕ ಫೋನಿನಲ್ಲಿ ಮಾತನಾಡಿದ ವಸಂತ ಸಿದ್ದಿ ಅಲ್ಲಿಂದ ಮನೆಗೆ ಮರಳುತ್ತಿದ್ದರು. ಆಗ ಅವರಿಗೆ ಅದೇ ಊರಿನ ಸುಭಾಷ್ ಸಿದ್ದಿ ಎದುರಿಗೆ ಸಿಕ್ಕರು. ಸುಭಾಷ್ ಸಿದ್ದಿ ಏಕಾಏಕಿ ಕೂಗಲು ಶುರು ಮಾಡಿದರು. ಎದುರಿಗಿದ್ದ ವಸಂತ ಸಿದ್ದಿ ಅವರನ್ನು ಹಿಡಿದು ಥಳಿಸಿದರು. ತಲೆ-ಬುಜಕ್ಕೆ ಹೊಡೆದು ಪೆಟ್ಟು ಮಾಡಿದ ಸುಭಾಷ ಸಿದ್ದಿ ವಿರುದ್ಧ ವಸಂತ ಸಿದ್ದಿ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದು, ಅಲ್ಲಿನ ಸೂಚನೆಯ ಪ್ರಕಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡರು.
Discussion about this post