ಕ್ರಿಮಿನಲ್ ಹಿನ್ನಲೆಯುಳ್ಳವರಿಗೆ ನೋಟಿಸ್ ನೀಡುವ ಮಾದರಿಯಲ್ಲಿ ಬನವಾಸಿ ಅರಣ್ಯಾಧಿಕಾರಿಗಳು ಅರಣ್ಯ ಅತಿಕ್ರಮಣದಾರರಿಗೆ ನೋಟಿಸ್ ನೀಡುತ್ತಿದ್ದು, ವಿಚಾರಣೆಗೆ ಹಾಜರಾದವರು ಕಾನೂನು ಪುಸ್ತಕದ ಬಗ್ಗೆ ಪ್ರಶ್ನಿಸಿದಾಗ ಅರಣ್ಯಾಧಿಕಾರಿ ಕಚೇರಿಯಲ್ಲಿ ಕಾನೂನು ಪುಸ್ತಕವೇ ಇಲ್ಲದಿರುವುದು ಗಮನಕ್ಕೆ ಬಂದಿದೆ. ಈ ವೇಳೆ `ನಾವು ಅಪರಾಧಿಗಳಲ್ಲ’ ಎಂದು ಅರಣ್ಯ ಅತಿಕ್ರಮಣದಾರರು ಘೋಷಣೆ ಕೂಗಿದ್ದಾರೆ.
ಶಿರಸಿಯ ಭಾಶಿ ಗ್ರಾಮ ಪಂಚಾಯತ ವ್ಯಾಪ್ತಿಯ ಮೊಗಳ್ಳಿ ಗ್ರಾಮದ ಅರಣ್ಯವಾಸಿಗಳಿಗೆ ಅರಣ್ಯ ಇಲಾಖೆ ನೋಟಿಸ್ ನೀಡಿದೆ. ಅರಣ್ಯ ಪ್ರದೇಶದಲ್ಲಿ ಅಡಿಕೆ ಮತ್ತು ಅನಾನಸ್ ಗಿಡಗಳನ್ನು ಹಾಕಿ ಸ್ವಾಧೀನ ಪಡಿಸಿಕೊಂಡಿರುವ ಕುರಿತು ಶಂಕಿತ ಆರೋಪದ ಅಡಿಯಲ್ಲಿ ಭಾರತೀಯ ನಾಗರೀಕ ಸುರಕ್ಷ ಸಂಹಿತೆ 2023, ಕಲಂ 35(3) ಮತ್ತು ಭಾರತೀಯ ನಾಗರೀಕ ಸುರಕ್ಷ ಸಂಹಿತೆ 2023 ಕಲಂ 94ರ ಅಡಿ ನೋಟಿಸ್ ಜಾರಿ ಮಾಡಿದೆ. ಅದರೊಂದಿಗೆ ಜುಲೈ 22ರ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದು, ವಿಚಾರಣೆಗೆ ಹಾಜರಾದವರು ಕಾನೂನು ಪುಸ್ತಕ ನೀಡುವಂತೆ ತಾಕೀತು ಮಾಡಿದರು. ಕಾನೂನು ಪುಸ್ತಕ ನೀಡಲು ಅಲ್ಲಿನ ಅಧಿಕಾರಿಗಳು ತಡಬಡಾಯಿಸಿದರು.
`ಜೀವನಕ್ಕಾಗಿ ಅರಣ್ಯ ಭೂಮಿ ಸಾಗುವಳಿ ಮಾಡುವ ಉದ್ದೇಶದಿಂದ ಹಲವಾರು ವರ್ಷದಿಂದ ಅತಿಕ್ರಮಿಸಿದವರಿಗೆ ಗಂಭೀರ ಸ್ವರೂಪದ ಅಪರಾಧ ಮಾಡಿದ ವ್ಯಕ್ತಿಗಳಿಗೆ ನೀಡುವ ಬಿಎನ್‌ಎಸ್‌ಎಸ್ ಕಾಯಿದೆ ಅಡಿ ನೋಟಿಸ್ ನೀಡಲಾಗಿದೆ. ಈ ಕ್ರಮವನ್ನು ಅಲ್ಲಿನ ಜನ ಖಂಡಿಸಿದರು. ಕಾನೂನು ಪುಸ್ತಕ ಇಲ್ಲದ ಕಚೇರಿಗೆ ತೆರಳಿದ ನ್ಯಾಯವಾದಿ ರವೀಂದ್ರ ನಾಯ್ಕ ಅಲ್ಲಿದ್ದ ಪ್ರಭಾರಿ ವಲಯ ಅರಣ್ಯ ಅಧಿಕಾರಿ ಗಿರೀಶ್ ನಾಯ್ಕ ಅವರಿಗೆ ಕಾನೂನು ಪಾಠ ಮಾಡಿದರು. ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಹಾಗೂ ಹೋರಾಟದ ಹಿನ್ನಲೆ ಬಗ್ಗೆ ವಿವರಿಸಿದರು.
ನೆಹರು ನಾಯ್ಕ ಬಿಳೂರು, ಎಮ್ ಆರ್ ನಾಯ್ಕ ಕಂಡ್ರಾಜಿ, ಮಾಂತೇಶ್ ಸಂತೋಳ್ಳಿ, ಎಮ್ ಕೆ ನಾಯ್ಕ, ಗಣಪತಿ ನಾಯ್ಕ ಬಾಶಿ, ಶೀವು ಗೌಡ ಕೊಟೆಕೊಪ್ಪ, ಕರಿಯಪ್ಪ ಗೌಡ, ಬಂಕನಾಳ, ತಿರುಮಲ ಮರಾಠಿ, ಸಿ ಆರ್ ನಾಯ್ಕ ಮರಿಗುಂಡಿ, ರಾಮಣ್ಣ ಹಾದಿಮನೆ ಕಲಕರಡಿ, ಗಣೇಶ ಕಿರವತ್ತಿ, ಟಿಪ್ಪು ನಾಯ್ಕ ಕಾಯಗುಡ್ಡಿ, ಈಶ್ವರ ನಾಯ್ಕ ಬೇಲೂರು, ಆನಂದ ಸನ್ಮನೆ, ಹೊನ್ನಪ್ಪ ಇತರರು ಅಧಿಕಾರಿಗಳ ನಡೆಗೆ ಆಕ್ಷೇಪವ್ಯಕ್ತಪಡಿಸಿದರು.
Discussion about this post