ಕಾರ್ಯನಿರತ ಪತ್ರಕರ್ತರ ಸಂಘ ನೀಡುವ `ಮಾಧ್ಯಮ ಶ್ರೀ’ ಪ್ರಶಸ್ತಿಗೆ ವಿಶ್ವವಾಣಿ ಹಾಗೂ ದೂರದರ್ಶನ ವರದಿಗಾರ್ತಿ ವಿನುತಾ ಹೆಗಡೆ ಆಯ್ಕೆಯಾಗಿದ್ದಾರೆ.
ಶಿರಸಿ ಪತ್ರಿಕಾ ಭವನದಲ್ಲಿ ಪತ್ರಿಕಾ ಸಂಘದ ತಾಲೂಕಾ ಅಧ್ಯಕ್ಷ ಸಂದೇಶ ಭಟ್ ಬೆಳಖಂಡ ನೇತೃತ್ವದಲ್ಲಿ ನಡೆದ ಕಾರ್ಯಕಾರಣಿ ಸಭೆಯಲ್ಲಿ ಈ ಕುರಿತು ನಿರ್ಣಯಿಸಲಾಗಿದೆ. 2006ರಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿರುವ ವಿನುತಾ ಹೆಗಡೆ ಅವರಿಗೆ `ಮಾಧ್ಯಮ ಶ್ರೀ’ ಪ್ರಶಸ್ತಿ ನೀಡಲು ಸರ್ವ ಸದಸ್ಯರು ಸಮ್ಮತಿ ಸೂಚಿಸಿದ್ದಾರೆ.
ಯಲ್ಲಾಪುರ ತಾಲೂಕಿನ ಭಾಗಿನಕಟ್ಟಾ ಮೂಲದ ವಿನುತಾ ಹೆಗಡೆ ಧಾರವಾಡ ಜೆಎಸ್‌ಎಸ್‌ನಲ್ಲಿ ಬಿಎ ಹಾಗೂ ಪತ್ರಿಕೋದ್ಯಮದಲ್ಲಿ ಎಂ ಎ ಪದವಿಪಡೆದಿದ್ದಾರೆ. ಹೊಸದಿಗಂತ, ಜನಮಾಧ್ಯಮ ಪತ್ರಿಕೆಯಲ್ಲಿ ಕೆಲಸ ಮಾಡಿದ್ದಾರೆ. ಕಡಲವಾಣಿ ವರದಿಗಾರಿಕೆ, ಸಂಪಾದಕೀಯ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. 2008ರ ಅವಧಿಯಲ್ಲಿ ಧ್ಯೇಯನಿಷ್ಟ ಪತ್ರಕರ್ತದ ಜಿಲ್ಲಾ ವರದಿಗಾರರಾಗಿ ಕಾರ್ಯ ನಿರ್ವಹಿಸಿದ್ದು ಈ ವೇಳೆ ಕೈಗಾ ಅಣುವಿದ್ಯುತ್ ಸ್ಥಾವರದಿಂದ ಕಾನ್ಸರ್ ಕುರಿತಾಗಿ ಅವರು ಬರೆದ ಸರಣಿ ಲೇಖನ ಸಂಚಲನ ಮೂಡಿಸಿದ್ದು ಇದೀಗ ಇತಿಹಾಸ.
ನಂತರ ಹುಬ್ಬಳ್ಳಿ ಧಾರವಾಡದಲ್ಲಿ ಹೊಸದಿಗಂತ ಪತ್ರಿಕೆಯ ವರದಿಗಾರರಾಗಿ ಗುರುತಿಸಿಕೊಂಡ ಅವರು 2014ರಿಂದ ಕನ್ನಡಪ್ರಭ ಉಪಸಂಪಾದಕಿಯಾಗಿ ನೇಮಕವಾಗಿದ್ದು, ನಂತರ ವಿಶ್ವವಾಣಿ ದಿನ ಪತ್ರಿಕೆಯಲ್ಲಿ ಹಿರಿಯ ಉಪಸಂಪಾದಕಿಯಾಗಿ ಐದು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದಾರೆ. ಇದರೊಂದಿಗೆ ಕಳೆದ ಆರು ಏಳು ವರ್ಷಗಳಿಂದ ದೂರದರ್ಶನ ಚಂದನ ವಾಹಿನಿಯಲ್ಲಿ ವರದಿಗಾರ್ತಿಯಾಗಿ ವಿಶ್ವವಾಣಿ ದಿನಪತ್ರಿಕೆಯ ಡಿಸ್ಟ್ರಿಕ್ಟ್ ಕರೆಸ್ಪೋಂಡೆAಟಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಮಧ್ಯೆ ಎರಡು ವರ್ಷಗಳ ಕಾಲ ಲೋಕಧ್ವನಿ ಸುದ್ದಿ ಸಂಪಾದಕಿಯಾಗಿ ಹಾಗೂ ವಿಶ್ವವಾಣಿಯ ಸ್ಥಾನಿಕ ಸಂಪಾದಕಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಸದ್ಯ ಲೋಕಧ್ವನಿಯಲ್ಲಿ ಕಂಡಿದ್ದು ಕಾಡಿದ್ದು ಅಂಕಣ ಬರೆಯುತ್ತಿದ್ದಾರೆ. ದೃಶ್ಯ ಮಾಧ್ಯಮ ಹಾಗೂ ಮುದ್ರಣ ಮಾಧ್ಯಮದಲ್ಲಿ ಎರಡರಲ್ಲಿಯೂ ಏಕಕಾಲಕ್ಕೆ ಕೆಲಸ ಮಾಡಿದ ಅನುಭವ ವಿನುತಾ ಹೆಗಡೆ ಅವರಿಗಿದೆ. ಆಕಾಶವಾಣಿಗಳಲ್ಲಿ ಅವರ ಸಂದರ್ಶನ ಪ್ರಸಾರವಾಗಿದೆ. ಹಳ್ಳಿಯಿಂದ ದಿಲ್ಲಿಯವರೆಗೆ ವರದಿಗಾರಿಕೆ ನಡೆಸಿದ ಅನುಭವವಿರುವ ವಿನುತಾ ಹೆಗಡೆ ಅವರನ್ನು ಅಗಸ್ಟ್ ಮೊದಲ ವಾರದಲ್ಲಿ ನಡೆಯುವ ಪತ್ರಿಕಾ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗೌರವಿಸಲಾಗುತ್ತದೆ ಎಂದು ತಾಲೂಕಾ ಸಂಘದ ಕಾರ್ಯದರ್ಶಿ ಕೃಷ್ಣಮೂರ್ತಿ ಕೆರೆಗದ್ದೆ ಹೇಳಿದ್ದಾರೆ.
Discussion about this post