ದೆಹಲಿಗೆ ಹೋಗಿದ್ದ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಕೇಂದ್ರ ಕೃಷಿ ಸಚಿವ ಶಿವರಾಜ ಸಿಂಗ್ ಚೌಹಾಣ್ ಅವರನ್ನು ಭೇಟಿ ಮಾಡಿ `ಥಾಂಕ್ಯೂ.. ಥಾಂಕ್ಯೂ’ ಎಂದು ಹೇಳಿದ್ದಾರೆ. ಸ್ವತಃ ಅಡಿಕೆ ಬೆಳೆಗಾರರಾಗಿರುವ ಕಾಗೇರಿ ಅವರು ಅಡಿಕೆ ಬೆಳೆಗಾರರ ಸಂಕಷ್ಟದ ಬಗ್ಗೆ ಸಚಿವರಿಗೆ ಮನವರಿಕೆ ಮಾಡಿದ್ದು, ಅಡಿಕೆ ವಿಮಾ ಪರಿಹಾರ ಜಮಾ ಆದದಕ್ಕಾಗಿ ಈ ಕೃತಜ್ಞತೆ ಸಲ್ಲಿಸಿದ್ದಾರೆ.
ಹವಾಮಾನ ವೈಪರಿತ್ಯದ ಕಾರಣ ಅಡಿಕೆ ಬೆಳೆಗಾರರು ನಷ್ಟ ಅನುಭವಿಸಿದ್ದರು. ಅಡಿಕೆ ಬೆಳೆಗಾರರು ಬೆಳೆ ವಿಮೆ ಮಾಡಿಸಿದ್ದರೂ ವಿಮಾ ಕಂಪನಿ ಪರಿಹಾರ ನೀಡಿರಲಿಲ್ಲ. ಕ್ಷೇಮಾ ವಿಮಾ ಕಂಪನಿಯ ಉದ್ಧಟತನದಿಂದ ಅಡಿಕೆ ಬೆಳೆಗಾರರಿಗೆ ನ್ಯಾಯ ಸಿಗುವ ಲಕ್ಷಣಗಳಿರಲಿಲ್ಲ. ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕರೂ ಆಗಿರುವ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವರಾಮ ಹೆಬ್ಬಾರ್ ವಿಮಾ ಪರಿಹಾರಕ್ಕಾಗಿ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ್ದರು. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸಹ ಕೇಂದ್ರ ಸರ್ಕಾರದಿಂದ ವಿಮಾ ಕಂಪನಿ ಮೇಲೆ ಒತ್ತಡ ತಂದಿದ್ದರು. ಮೂರು ಬಾರಿ ನಿರಂತರ ಪತ್ರ ಬರೆದ ಪರಿಣಾಮ ಅಡಿಕೆ ಬೆಳೆಗಾರರಿಗೆ ನಷ್ಟ ಪರಿಹಾರ ಸಿಕ್ಕಿತು.
ಹೀಗಾಗಿ ದೆಹಲಿಗೆ ಹೋಗಿದ್ದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿ ಮಾಡಿದರು. `ಜಿಲ್ಲೆಯಲ್ಲಿ ಸಂಕಷ್ಟಕ್ಕೆ ಒಳಗಾಗಿದ್ದ ಅಡಿಕೆ ಬೆಳೆಗಾರರಿಗೆ ದೊರೆಯಬೇಕಾಗಿದ್ದ ಹವಾಮಾನ ಆಧಾರಿತ ಬೆಳೆ ವಿಮೆ ಒದಗಿಸಿದಕ್ಕೆ ತಮಗೆ ಧನ್ಯವಾದ’ ಎಂದು ಹೇಳಿದರು. ಇದರೊಂದಿಗೆ ಅಡಿಕೆ ಬೆಳೆಗಾರರ ಸಮಸ್ಯೆಗಳನ್ನು ಕೂಲಂಕಷವಾಗಿ ಚರ್ಚಿಸಲು ಮತ್ತು ಸೂಕ್ತ ಪರಿಹಾರ ಹುಡುಕಲು ಅಡಿಕೆ ಬೆಳೆಯುವ ಪ್ರದೇಶಗಳ ಸಂಸದರು ಮತ್ತು ಅಡಿಕೆ ಬೆಳೆಗಾರರ ಸಂಘಟನೆ ಪ್ರತಿನಿಧಿಗಳ ಸಭೆ ನಡೆಸುವಂತೆಯೂ ಮನವಿ ಮಾಡಿದರು.
ಕರ್ನಾಟಕ ಸರ್ಕಾರದ ಮಳೆ ಮಾಪನ ಯಂತ್ರಗಳ ನಿರ್ವಹಣೆಯಲ್ಲಿನ ಅವ್ಯವಸ್ಥೆ, ಹವಾಮಾನ ಆಧಾರಿತ ಬೆಳೆ ವಿಮೆ ಮಹತ್ವದ ಬಗ್ಗೆ ಸಚಿವರ ಬಳಿ ಚರ್ಚಿಸಿದರು. ಈ ವಿಷಯದಲ್ಲಿ ಕೇಂದ್ರ ಸರ್ಕಾರದ ಹಸ್ತಕ್ಷೇಪ ಮಾಡಬೇಕು ಎಂದು ಒತ್ತಾಯಿಸಿದರು.
Discussion about this post