ರಾಜ್ಯದಲ್ಲಿ 1,500 ಸ್ಥಳದಲ್ಲಿನ ಮಳೆ ಮಾಪನ ಕೇಂದ್ರಗಳು ದುಸ್ಥಿತಿಯಲ್ಲಿವೆ. ಅದರಲ್ಲಿಯೂ ಉತ್ತರ ಕನ್ನಡ ಜಿಲ್ಲೆಯ 136ಕ್ಕೂ ಹೆಚ್ಚು ಮಳೆಮಾಪನ ಯಂತ್ರಗಳು ಕೆಲಸ ಮಾಡುತ್ತಿಲ್ಲ.
ಮಳೆ ಲೆಕ್ಕಾಚಾರ, ಹವಾಮಾನ ವೈಪರಿತ್ಯ, ಪೃಕೃತಿ ವಿಕೋಪಗಳ ಅಧ್ಯಯನ, ವಿಮಾ ಪರಿಹಾರ ಸೇರಿ ವಿವಿಧ ಅಳತೆ ಮಾನದಂಡಗಳಿಗೆ ಮಳೆ ಮಾಪನ ಕೇಂದ್ರದ ದಾಖಲೆಗಳು ಅನಿವಾರ್ಯ. ಆದರೆ, ಮಳೆ ಮಾಪನ ಕೇಂದ್ರಗಳಲ್ಲಿನ ಯಂತ್ರಗಳೇ ಹಾಳಾಗಿರುವುದರಿಂದ ಸರ್ಕಾರವೂ ಇಕ್ಕಟ್ಟಿಗೆ ಸಿಲುಕಿದೆ. ಮಳೆ ಮಾಪನ ಕೇಂದ್ರ ದುಸ್ಥಿತಿ ಬಗ್ಗೆ ಮಂಗಳವಾರ ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರೇ ಅಧಿಕೃತ ಮಾಹಿತಿ ನೀಡಿದ್ದು, ಎಲ್ಲಾ ಮಳೆ ಮಾಪನ ಕೇಂದ್ರಗಳನ್ನು ಸರಿಪಡಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
`ಉತ್ತರ ಕನ್ನಡ ಜಿಲ್ಲೆಯಲ್ಲಿನ 136 ಕ್ಕೂ ಹೆಚ್ಚು ಮಳೆಮಾಪನ ಯಂತ್ರಗಳು ಹಾಳಾಗಿದೆ. ರಾಜ್ಯದ ಸುಮಾರು 1,500 ಸ್ಥಳಗಳಲ್ಲಿ ಮಳೆ ಮಾಪನ ಕೇಂದ್ರಗಳು ದುಸ್ಥಿತಿಯಲ್ಲಿವೆ. ಅವುಗಳನ್ನು ದುರಸ್ತಿ ಮಾಡಿಸುವ ಕೆಲಸ ನಡೆಯಲಿದೆ. ಯಂತ್ರಗಳು ಸಂಪೂರ್ಣ ಹಾಳಾಗಿದ್ದರೆ ಹೊಸ ಯಂತ್ರಗಳ ಅಳವಡಿಕೆ ನಡೆಯಲಿದೆ’ ಎಂದವರು ಹೇಳಿದ್ದಾರೆ. ಶಿರಸಿ ತಾಲೂಕಿನ ಬೆಣ್ಣೆಹೊಳೆ ಸೇತುವೆ, ಭೂ ಕುಸಿತ ಸಂಭವಿಸಿರುವ ಕುಮಟಾ ತಾಲೂಕಿನ ದೇವಿಮನೆ ಘಟ್ಟ ಪ್ರದೇಶದಲ್ಲಿ ಸಚಿವರು ಪರಿಶೀಲನೆ ನಡೆಸಿದರು. ದೇವಿಮನೆ ಘಟ್ಟದಲ್ಲಿ ತಡೆಗೋಡೆ ನಿರ್ಮಿಸದೆ ಹೆದ್ದಾರಿ ಕಾಮಗಾರಿ ಕೈಗೆತ್ತಿಕೊಂಡಿದ್ದಕ್ಕೆ ಆರ್‌ಎನ್‌ಎಸ್ ಇನ್‌ಫ್ರಾಸ್ಟ್ರಕ್ಟರ್ ಕಂಪನಿ ಅಧಿಕಾರಿಗಳನ್ನು ಈ ವೇಳೆ ತರಾಟೆಗೆ ತೆಗೆದುಕೊಂಡರು.
ಮಾಧ್ಯಮದವರೊoದಿಗೆ ಮಾತನಾಡಿದ ಸಚಿವ ಕೃಷ್ಣಬೈರೇಗೌಡ `ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಭೂಕುಸಿತ, ಕಡಲ ಕೊರೆತ ಸಮಸ್ಯೆ ಎದುರಿಸುತ್ತಿರುವ ಜಿಲ್ಲೆಗಳಲ್ಲಿ ತುರ್ತು ಕಾಮಗಾರಿ ಕೈಗೊಳ್ಳಲು 800 ಕೋಟಿ ರೂ ಅನುದಾನಕ್ಕೆ ಶೀಘ್ರವೇ ಅನುಮೋದನೆ ನೀಡಲಾಗುವುದು’ ಎಂದು ಘೋಷಿಸಿದರು. `ರಾಜ್ಯದ 6 ಜಿಲ್ಲೆಗಳಲ್ಲಿ ಭೂಕುಸಿತ ಸಮಸ್ಯೆ ತೀವ್ರವಾಗಿದ್ದು, ಈ ಭಾಗದಲ್ಲಿ ತಡೆಗೋಡೆ ನಿರ್ಮಿಸುವ ಕಾಮಗಾರಿಗಾಗಿ 500 ಕೋಟಿ ಮೀಸಲಿಡಲಾಗುತ್ತಿದೆ’ ಎಂದರು.
`ರಾಜ್ಯದ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಕಡಲು ಕೊರೆತ ಸಮಸ್ಯೆ ತಡೆಗೆ ಪ್ರತಿ ಜಿಲ್ಲೆಗೆ ನೂರು ಕೋಟಿಯಂತೆ 300 ಕೋಟಿ ಒದಗಿಸಲಾಗುತ್ತದೆ. ತಡೆಗೋಡೆ ನಿರ್ಮಾಣ ಸೇರಿದಂತೆ ಪ್ರಕೃತಿ ವಿಕೋಪ ತಡೆಗೆ ಕೇಂದ್ರ ಸರ್ಕಾರದ ಹಣಕಾಸು ಇಲಾಖೆಯಿಂದ ಅನುದಾನ ಬಿಡುಗಡೆಯಾಗಲು ವಿಳಂಬವಾಗಿದೆ. ಈ ಕುರಿತಂತೆ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಕೇಂದ್ರದ ಅನುದಾನ ಬಿಡುಗಡೆ ವಿಳಂಬವಾಗಿರುವುದರಿAದ ತಡೆಗೋಡೆ ಹಾಗೂ ಪ್ರಕೃತಿ ವಿಕೋಪದ ಕಾಮಗಾರಿ ನಡೆಸಲು ವಿಳಂಬವಾಗಿದೆ’ ಎಂದು ತಿಳಿಸಿದರು.
ಇದರೊಂದಿಗೆ `ಕಂದಾಯ ದಾಖಲೆಗಳನ್ನು ಗಣಕೀಕರಣ ಮಾಡಲಾಗುತ್ತಿದೆ. ಜನರಿಗೆ ದಾಖಲೆಗಳು ಸುಲಭವಾಗಿ ಸಿಗುವಂತೆ ಮಾಡಲಾಗುತ್ತಿದೆ. ಮುಂದಿನ 6 ತಿಂಗಳ ಒಳಗೆ ರಾಜ್ಯದ ಎಲ್ಲ ಕಂದಾಯ ದಾಖಲೆಗಳನ್ನು ಸಂಪೂರ್ಣ ಗಣಕೀಕರಣ ಮಾಡುವ ಗುರಿ ಹೊಂದಲಾಗಿದೆ’ ಎಂದರು. `ರಾಜ್ಯದಲ್ಲಿ ಪೌತಿ ಖಾತೆ ಆಂದೋಲನ ನಡೆಸಲಾಗುತ್ತಿದ್ದು ಮೃತರ ಅಧಿಕೃತ ವಾರಿಸುದಾರರಿಗೆ ಪಹಣಿ ದಾಖಲೆಗಳನ್ನು ವರ್ಗಾವಣೆ ಮಾಡಲಾಗುವುದು’ ಎಂದರು.
ಈ ಸಂದರ್ಭದಲ್ಲಿ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲ ಸಾರಿಗೆ ಸಚಿವ ಮಂಕಾಳ ಎಸ್ ವೈದ್ಯ, ಶಾಸಕರಾದ ಭೀಮಣ್ಣ ನಾಯ್ಕ, ದಿನಕರ ಶೆಟ್ಟಿ, ಜಿಲ್ಲಾಧಿಕಾರಿ ಕೆ ಲಕ್ಷ್ಮಿಪ್ರಿಯ ಮತ್ತಿತರರು ಉಪಸ್ಥಿತರಿದ್ದರು.
Discussion about this post