ಕುಮಟಾದ ಹೆಗಡೆ ಗ್ರಾ ಪಂ ವ್ಯಾಪ್ತಿಯ ಲುಕ್ಕೇರಿ ಬಳಿಯಿರುವ ಸೇತುವೆ ಶಿಥಿಲಗೊಂಡಿದ್ದು, ಆ ಸೇತುವೆಯನ್ನು ಕೆಲ ಪುಂಡಪೋಕರಿಗಳು ಅಡ್ಡೆ ಮಾಡಿಕೊಂಡಿದ್ದಾರೆ. ಜೊತೆಗೆ ಕೆಲ ಮೀನುಗಾರರು ಅಲ್ಲಿ ಬಲೆ ಬೀಸಿ ಮೀನುಗಾರಿಕೆ ನಡೆಸುತ್ತಿದ್ದಾರೆ. `ಈ ಸೇತುವೆ ಬಗ್ಗೆ ಲಕ್ಷ್ಯವಹಿಸಿ’ ಎಂದು ಜನಸಾಮಾನ್ಯರ ಸಮಾಜಕಲ್ಯಾಣ ಕೇಂದ್ರದವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಕಾರವಾರದ ಸಣ್ಣ ನೀವಾರವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಸಹಾಯಕ ಕಾರ್ಯ ನಿರ್ವಹಕರಿಗೆ ರವಾನೆಯಾದ ಪತ್ರದಲ್ಲಿ ಸೇತುವೆ ದುಸ್ತಿತಿ ಹಾಗೂ ಅಲ್ಲಿನ ಅವ್ಯವಸ್ಥೆಗಳ ಬಗ್ಗೆ ವಿವರಿಸಲಾಗಿದೆ. ಅದರ ಪ್ರಕಾರ, ಅಘನಾಶಿನಿ ಹಿನ್ನೀರಿನ ಸೇತುವೆ ಮೇಲೆ ಕೆಲ ಪುಂಡರು ನಿಂತಿದ್ದು ಅವರು ಮಹಿಳೆಯರನ್ನು ಚುಡಾಯಿಸುವುದನ್ನು ಕಾಯಕ ಮಾಡಿಕೊಂಡಿದ್ದಾರೆ. ಕೆಲ ಮೀನುಗಾರರು ಸೇತುವೆ ಮೇಲೆ ನಿಂತು ಮೀನು ಹಿಡಿಯುತ್ತಿದ್ದು, ಸೇತುವೆಯ ತಡೆಗೋಡೆ ಹಾಳು ಮಾಡುತ್ತಿದ್ದಾರೆ. ಈ ಎರಡು ಪ್ರಕ್ರಿಯೆಗೆ ಕಡಿವಾಣ ಹಾಕಬೇಕು ಎಂಬುದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರ ದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ಅವರ ಆಗ್ರಹ.

`2017ರಲ್ಲಿ 1.80 ಕೋಟಿ ರೂ ವೆಚ್ಚದಲ್ಲಿ ಸೇತುವೆ ನಿರ್ಮಾಣವಾಗಿದೆ. ಆದರೆ, ಸೇತುವೆಯ ತಡೆಗೋಡೆ ಮುರಿಯುತ್ತಿದ್ದು, ಇದರಿಂದ ವಾಹನ ಸವಾರರು ಅಪಾಯ ಎದುರಿಸುತ್ತಿದ್ದಾರೆ. ತಿರುವಿನಲ್ಲಿ ವಾಹನ ವೇಗವಾಗಿ ಬಂದರೆ ನದಿಗೆ ಬೀಳುವ ಸಾಧ್ಯತೆಗಳಿವೆ. ಕೆಲ ಪುಂಡರು ಅಲ್ಲಿ ನಿತ್ಯ ಮಹಿಳೆಯರಿಗೆ ಚುಡಾಯಿಸುವುದರಿಂದ ಒಂಟಿಯಾಗಿ ಹೆಣ್ಣು ಮಕ್ಕಳು ಆ ಕಡೆ ಹೋಗಲು ಹೆದರುತ್ತಿದ್ದಾರೆ’ ಎಂದು ಸಾಮಾಜಿಕ ಕಾರ್ಯಕರ್ತ ಸುಧಾಕರ ನಾಯ್ಕ ವಿವರಿಸಿದ್ದಾರೆ.
ಈ ಬಗ್ಗೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ಬಗ್ಗೆ ಪ್ರಮುಖರಾದ ಶ್ರೀಪಾದ್ ಪಟಗಾರ, ಪುರ್ಸೊ ಹರಿಕಾಂತ್, ಲಕ್ಷ್ಮಿ ನಾಯ್ಕ, ಪಾರ್ವತಿ ಪಟಗಾರ, ಇಮಾಮ್, ಜೂಕಾಕೋ ಇನ್ನಿತರರು ತಿಳಿಸಿದರು.
Discussion about this post