`ಉತ್ತರ ಕನ್ನಡ ಜಿಲ್ಲೆಯಲ್ಲಿದ್ದ ಗೋಮಾಳ ಪ್ರದೇಶವನ್ನು ಅನ್ಯ ಉದ್ದೇಶಕ್ಕೆ ಬಳಸಲಾಗಿದ್ದು, ಇದೀಗ ಜಾನುವಾರುಗಳನ್ನು ಮೇವಿಗಾಗಿ ಕಾಡಿಗೆ ಬಿಡಬಾರದು ಎಂದು ಆದೇಶಿಸಿರುವುದು ಸರಿಯಲ್ಲ’ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಉತ್ತರ ಕನ್ನಡ ಜಿಲ್ಲಾ ಸಮಿತಿ ಅಧ್ಯಕ್ಷ ಶಾಂತಾರಾಮ ನಾಯಕ ಹೇಳಿದ್ದಾರೆ. `ಕೂಡಲೇ ಈ ಆದೇಶ ಹಿಂಪಡೆಯಬೇಕು’ ಎಂದವರು ಒತ್ತಾಯಿಸಿದ್ದಾರೆ.
`ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ಗೋಮಾಳವೇ ಇಲ್ಲ. ಇದ್ದ ಗೋಮಾಳವನ್ನು ಬೇರೆ ಉದ್ದೇಶಕ್ಕೆ ಬಳಸಲಾಗಿದೆ. ಈಗಿರುವ ಗೋಮಾಳಗಳು ಜಾನುವಾರುಗಳಿಗೆ ಸಾಲುತ್ತಿಲ್ಲ. ಹೀಗಿರುವಾಗ ಜನ ತಮ್ಮ ಸಾಕುಪ್ರಾಣಿಗಳನ್ನು ಅರಣ್ಯಕ್ಕೆ ಬಿಡುತ್ತಿದ್ದು, ಇದಕ್ಕೆ ಸರ್ಕಾರ ನಿಷೇಧ ಹೇರಿರುವುದು ಸರಿಯಲ್ಲ’ ಎಂದು ಅವರು ಹೇಳಿದ್ದಾರೆ.
`ಗುಡ್ಡಗಾಡಿನಲ್ಲಿ ಬದುಕು ಕಟ್ಟಿಕೊಂಡಿರುವ ಲಕ್ಷಾಂತರ ಜನ ಹೈನುಗಾರಿಕೆ ನಂಬಿದ್ದಾರೆ. ಜಾನುವಾರುಗಳ ಮೇವಿಗೆ ಅರಣ್ಯ ಅನಿವಾರ್ಯವಾಗಿದೆ. ಅಂಥ ಪರಿಸ್ಥಿತಿಯಲ್ಲಿ ಸರ್ಕಾರ ಜನವಿರೋಧಿ ಆದೇಶ ಹೊರಡಿಸಿದ್ದು ಮೂರ್ಖತನ. ಅರಣ್ಯ ಕಿರು ಉತ್ಪನ್ನ ಬಳಸಲು ಅವಕಾಶ ನೀಡಿದ ರೀತಿ ಜಾನುವಾರು ಮೇವಿಗೂ ಅರಣ್ಯದಲ್ಲಿ ಅವಕಾಶವಿದೆ’ ಎಂದವರು ಹೇಳಿದ್ದಾರೆ.
`ಸಚಿವರು ತಪ್ಪು ತಿಳುವಳಿಕೆಯಿಂದ ಟಿಪ್ಪಣಿ ಹೊರಡಿಸಿದ್ದು, ಅದನ್ನು ಹಿಂಪಡೆಯದೇ ಇದ್ದರೆ ಹೋರಾಟ ಖಚಿತ’ ಎಂದು ಎಚ್ಚರಿಸಿದ್ದಾರೆ.
Discussion about this post