ಕುಮಟಾ ಬಾಡದ ಹುಬ್ಬಣಗೇರಿ ಶಾಲೆಯ ಬಳಿ ತ್ಯಾಜ್ಯ ಘಟಕ ನಿರ್ಮಿಸದಂತೆ ಊರಿನವರು ಆಗ್ರಹಿಸಿದರೂ ಗ್ರಾಮ ಪಂಚಾಯತ ಅದಕ್ಕೆ ತಲೆಕೆಡಿಸಿಕೊಂಡಿಲ್ಲ. ಈ ಬಗ್ಗೆ ಜೂನ್ 30ರಂದು ಗ್ರಾಮಸ್ಥರು ನೀಡಿದ ತಕರಾರು ಅರ್ಜಿ ಈವರೆಗೂ ಜಿಲ್ಲಾಡಳಿತದ ಕಚೇರಿಗೆ ತಲುಪಿಲ್ಲ!
ಕುಮಟಾದ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಬಾಡದ ಹುಬ್ಬಣಗೇರಿ ಗ್ರಾಮದ ಸಮಸ್ಯೆ ಬಗ್ಗೆ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದರು. ಶಾಲೆ ಹಾಗೂ ಅಂಗನವಾಡಿ ಪಕ್ಕ ತ್ಯಾಜ್ಯ ಘಟಕ ನಿರ್ಮಿಸಿದ ಬಗ್ಗೆ ಆಕ್ಷೇಪಿಸಿದ್ದರು. ಕುಮಟಾ ವಿಭಾಗಾಧಿಕಾರಿಗಳ ಮೂಲಕ ಜಿಲ್ಲಾಡಳಿತಕ್ಕೆ ಮನವಿ ರವಾನಿಸಿದ್ದರು. ಆದರೆ, ಈ ಮನವಿ ಬಗ್ಗೆ ಫೋನ್ ಮಾಡಿ ಪ್ರಶ್ನಿಸಿದಾಗ `ಅಂಥ ಮನವಿಯೇ ಬಂದಿಲ್ಲ’ ಎಂದು ಜಿಲ್ಲಾಡಳಿತದ ಸಿಬ್ಬಂದಿ ಉತ್ತರಿಸಿದ್ದಾರೆ.
ಜಿಲ್ಲಾಧಿಕಾರಿಗಳ ಆಪ್ತ ಸಹಾಯಕ ಶಶಿದರ ಪನ್ನುರ ಅವರಿಗೆ ಫೋನ್ ಮಾಡಿದಾಗ `ನಿಮ್ಮ ಅರ್ಜಿ ಬಂದಿಲ್ಲ. ತರಿಸಿಕೊಳ್ಳುತ್ತೇನೆ’ ಎಂದಿರುವ ಬಗ್ಗೆ ಆಗ್ನೇಲ್ ರೋಡ್ರಿಗಸ್ ದೂರಿದ್ದಾರೆ. ಕುಮಟಾ ಉಪವಿಭಾಗಾಧಿಕಾರಿಗಳಿಗೆ ನೀಡಿದ ಅರ್ಜಿ ಕಸದ ಬುಟ್ಟಿ ಸೇರಿದ ಅನುಮಾನವನ್ನು ಅವರು ವ್ಯಕ್ತಪಡಿಸಿದ್ದಾರೆ. 23 ದಿನ ಕಳೆದರೂ ಆ ಅರ್ಜಿ ಜಿಲ್ಲಾಡಳಿತಕ್ಕೆ ತಲುಪದ ಬಗ್ಗೆ ಅಸಮಧಾನವ್ಯಕ್ತಪಡಿಸಿದ್ದಾರೆ.
`ಸಮಸ್ಯೆ ಬಗ್ಗೆ ಪಿಡಿಓ ಕಮಲಾ ಹರಿಕಾಂತ್ ಸಹ ಸ್ಪಂದಿಸಿಲ್ಲ. ಪದೇ ಪದೇ ಅಲ್ಲಿಯೇ ಕಸ ತಂದು ಎಸೆಯಲಾಗುತ್ತಿದೆ. ವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ ಅವರು ಸಾರ್ವಜನಿಕ ಸಮಸ್ಯೆಗೆ ಸ್ಪಂದಿಸುತ್ತಿಲ್ಲ’ ಎಂದವರು ದೂರಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿಯೂ ಹೇಳಿದ್ದಾರೆ.
Discussion about this post