ಕಾರವಾರದ ಕಣಸಗಿರಿಯಲ್ಲಿ ನಿರ್ಮಿಸಲಾದ ಗೋಶಾಲೆ ಕಳಪೆಯಾಗಿದ್ದು, ಇಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ಆರೋಪಿಸಿದೆ. ಈ ಬಗ್ಗೆ ಹೋರಾಟ ನಡೆಸುವುದಾಗಿ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಮೋಹನ ಗೌಡ ಹೇಳಿದ್ದಾರೆ.
`ಬಿಜೆಪಿ ಸರ್ಕಾರ ರಾಜ್ಯದ ಎಲ್ಲಾ ಜಿಲ್ಲಾಕೇಂದ್ರ ಹಾಗೂ ತಾಲೂಕು ಕೇಂದ್ರಗಳಲ್ಲಿ ಗೋಶಾಲೆ ನಿರ್ಮಿಸಲು ಅನುಮತಿ ನೀಡಿತ್ತು. ಪ್ರತಿ ಗೋಶಾಲೆಗೆ 50 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿತ್ತು. ಆ ಹಣ ಸರಿಯಾಗಿ ಬಳಕೆಯಾಗಿಲ್ಲ’ ಎಂಬುದು ಮೋಹನ ಗೌಡ ಅವರ ದೂರು. `ಮಾಹಿತಿ ಹಕ್ಕು ಕಾಯ್ದೆ ಅಡಿ ಪಡೆದ ದಾಖಲೆಗಳಿಂದ ಭ್ರಷ್ಟಾಚಾರ ನಡೆದಿರುವುದು ಅರಿವಾಗಿದ್ದು, ಅಧಿಕಾರಿಗಳ ವಿರುದ್ಧ ಕ್ರಮವಾಗಬೇಕು’ ಎಂದವರು ಆಗ್ರಹಿಸಿದ್ದಾರೆ.
`ನಿರ್ಮಿತಿ ಕೇಂದ್ರ ಕಾಮಗಾರಿ ಮುಗಿಸಿದ ಬಳಿಕ ತಾಂತ್ರಿಕ ಅನುಮೋದನೆ ಪಡೆದಿದೆ. ಬಜೆಟ್ ಪ್ರಕಾರ 50 ಲಕ್ಷ ರೂ ಮೊತ್ತದ ಕಾಮಗಾರಿಯ ಪೈಕಿ 38 ಲಕ್ಷದ ಕಾಮಗಾರಿಗೆ ಮಾತ್ರ ಬಿಲ್ ಇದೆ. ಉಳಿದ ಹಣದ ಲೆಕ್ಕಾಚಾರವೇ ಇಲ್ಲ’ ಎಂದವರು ವಿವರಿಸಿದರು. `ಬ್ಲಾಕ್, ಕಬ್ಬಿಣ ಖರೀದಿ ವಿಷಯದಲ್ಲಿ ಅವ್ಯವಹಾರ ನಡೆದಿದೆ. ಸಿಮೆಂಟ್ ವಿಷಯದಲ್ಲಿಯೂ ಅನುಮಾನಗಳಿವೆ. ಅಗತ್ಯಕ್ಕಿಂತ ಹೆಚ್ಚಿನ ಸಿಮೆಂಟ್ ಖರೀದಿಸಿ ಬಿಲ್ ಮಾಡಲಾಗಿದೆ’ ಎಂದು ದೂರಿದರು.
`ಗೋ ಶಾಲೆ ನಿರ್ಮಾಣ ನಮಗೆ ಖುಷಿ ತಂದಿತ್ತು. ಆದರೆ, ಗೋಶಾಲೆ ಸರಿಯಾಗಿ ನಿರ್ಮಿಸದಿರುವುದು ಬೇಸರ ತಂದಿದೆ’ ಎಂದು ಸನಾತನ ಧರ್ಮ ಚಾರಿಟೆಬಲ್ ಟ್ರಸ್ಟಿನ ಸಂದೀಪ್ ಗೋಕರ್ಣಕರ ಹೇಳಿದರು. `ಈ ಕುರಿತು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದರೂ ಈವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ’ ಎಂದು ಬೇಸರವ್ಯಕ್ತಪಡಿಸಿದರು. ಗಜೇಂದ್ರ ನಾಯ್ಕ, ಶರತ್, ಅಮಿತ ಮಾಳ್ಸೇಕರ, ಸೂರ್ಯಕಾಂತ ಕಳಸ ಇತರರು ಇದಕ್ಕೆ ಆಕ್ಷೇಪವ್ಯಕ್ತಪಡಿಸಿದರು.
Discussion about this post