ಶಿರಸಿ ಡಿವೈಎಸ್‌ಪಿ ಗೀತಾ ಪಾಟೀಲ್ ಅವರು ಯಲ್ಲಾಪುರದ ಮಂಚಿಕೇರಿ ಭಾಗದಲ್ಲಿ ಮನೆ ಮನೆ ಭೇಟಿ ನಡೆಸಿದ್ದಾರೆ. ಜನರ ಸಮಸ್ಯೆಗಳನ್ನು ಆಲಿಸಿದ ಅವರು ಪರಿಹಾರ ಕ್ರಮಗಳ ಬಗ್ಗೆ ಚರ್ಚಿಸಿದ್ದಾರೆ.
ಜನರ ಸಮಸ್ಯೆ ಆಲಿಸಲು ಸರ್ಕಾರ ಮನೆ ಮನೆಗೂ ಪೊಲೀಸರನ್ನು ಕಳುಹಿಸುತ್ತಿದೆ. `ಮನೆ ಮನೆಗೂ ಪೊಲೀಸ್’ ಅಭಿಯಾನದ ಅಂಗವಾಗಿ ಡಿವೈಎಸ್‌ಪಿ ಗೀತಾ ಪಾಟೀಲ್ ಅವರು ತಮ್ಮ ತಂಡದೊoದಿಗೆ ಬುಧವಾರ ಮಂಚಿಕೇರಿಗೆ ಹೋಗಿದ್ದರು. ಅಪರಾಧ ನಿಯಂತ್ರಣ, ನಾಗರಿಕ ರಕ್ಷಣೆ ಬಗ್ಗೆ ಅವರು ಅಲ್ಲಿದ್ದವರಿಗೆ ಅರಿವು ಮೂಡಿಸಿದರು.
ಈಗಾಗಲೇ ಎಲ್ಲಾ ಪೊಲೀಸ್ ಠಾಣೆಯಲ್ಲಿ ಗಸ್ತು ವ್ಯವಸ್ಥೆ ಜಾರಿಯಲ್ಲಿದೆ. ಅದನ್ನು ಇನ್ನಷ್ಟು ಭಲಪಡಿಸುವ ಉದ್ದೇಶದಿಂದ ಸರ್ಕಾರ ಆಂದೋಲನ ರೂಪಿಸಿದೆ. ಬೀಟ್ ಪೊಲೀಸ್ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿಭಾಯಿಸುವುದು ಈ ಆಂದೋಲನದ ಮುಖ್ಯ ಉದ್ದೇಶ. ಹೀಗಾಗಿ ಪ್ರತಿ ಮನೆಗೂ ಪೊಲೀಸರನ್ನು ಕಳುಹಿಸಿ ಪ್ರೀತಿಗಳಿಸುವುದಕ್ಕಾಗಿ `ಮನೆ ಮನೆ ಪೊಲೀಸ್’ ಯೋಜನೆ ರೂಪಿಸಲಾಗಿದೆ.
40-50 ಮನೆಗಳನ್ನು ಒಂದು ಕ್ಲಷ್ಟರ್ ಎಂದು ಪರಿಗಣಿಸಿ ಅಲ್ಲಿನ ಚಟುವಟಿಕೆಗಳ ಮೇಲೆ ಪೊಲೀಸರು ನಿಗಾವಹಿಸುತ್ತಾರೆ. ಅಪರಿಚಿತ ವ್ಯಕ್ತಿಗಳ ಆಗಮನ, ಅನುಮಾನಾಸ್ಪದ ವರ್ತನೆಗಳ ಮೇಲೆ ಕಣ್ಣಿಡುತ್ತಾರೆ. ಜೊತೆಗೆ ಸಾರ್ವಜನಿಕರ ಸಹಭಾಗಿತ್ವದಲ್ಲಿ ಅಪರಾಧ ಕೃತ್ಯ ತಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಬಾಡಿಗೆ ಮನೆಗಳ ಮೇಲೆಯೂ ಪೊಲೀಸರು ಮುತುವರ್ಜಿವಹಿಸಿದ್ದು, ಅಲ್ಲಿ ವಾಸಿಸುವವರ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.
ಈ ಎಲ್ಲಾ ವಿಷಯದ ಜೊತೆ ಎಲ್ಲರ ಸಮಸ್ಯೆಯನ್ನು ಆಲಿಸಿ, ಅದಕ್ಕೆ ಪರಿಹಾರ ಕಲ್ಪಿಸುವ ಗುರಿ ಜನಸ್ನೇಹಿ ಪೊಲೀಸ್ ವ್ಯವಸ್ಥೆಯದ್ದಾಗಿದೆ. ಈ ನಿಟ್ಟಿನಲ್ಲಿ ಶಿರಸಿ ಡಿವೈಎಸ್‌ಪಿ ಗೀತಾ ಪಾಟೀಲ್ ಅವರು ಬುಧವಾರ ಮಂಚಿಕೇರಿ ಭಾಗದಲ್ಲಿ ಮನೆ ಮನೆ ಸಂಚಾರ ಮಾಡಿದ್ದಾರೆ. ಅಲ್ಲಲ್ಲಿ ಜನ ತಮ್ಮ ಸಮಸ್ಯೆ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳಲ್ಲಿ ಹೇಳಿಕೊಂಡಿದ್ದು, ಅದನ್ನು ಅವರು ಡೈರಿಯಲ್ಲಿ ದಾಖಲಿಸಿಕೊಂಡಿದ್ದಾರೆ.
ಡಿವೈಎಸ್‌ಪಿ ಗೀತಾ ಪಾಟೀಲ್ ಅವರ ಜೊತೆ ಯಲ್ಲಾಪುರ ಪಿಐ ರಮೇಶ ಹಾನಾಪುರ, ಪಿಎಸ್‌ಐ ಯಲ್ಲಾಲಿಂಗ ಕನ್ನೂರು, ಪೊಲೀಸ್ ಸಿಬ್ಬಂದಿ ಸಿಬ್ಬಂದಿ ದೀಪಕ ನಾಯ್ಕ, ಪರಶುರಾಮ ದೊಡ್ಮನಿ, ಚನ್ನಕೇಶವ, ಸ್ಥಳೀಯರಾದ ಎಂ ಕೆ ಭಟ್ಟ ಯಡಳ್ಳಿ ಇತರರು ಇದ್ದರು.
Discussion about this post