60 ವರ್ಷ ಪೂರೈಸಿದ ಬಡವವರಿಗೆ ಸರ್ಕಾರ ವೃದ್ದಾಪ್ಯ ವೇತನ ನೀಡುತ್ತಿದ್ದು, ಅನೇಕರು ಆ ವಯಸ್ಸಿಗೂ ಮುನ್ನವೇ ಪಿಂಚಣಿಪಡೆಯುತ್ತಿದ್ದಾರೆ. ಆದಾಯ ತೆರಿಗೆ ಪಾವತಿದಾರರ ಜೊತೆ ಎಪಿಎಲ್ ಕಾರ್ಡು ಹೊಂದಿದವರು, ಸರ್ಕಾರಿ ನೌಕರರು ಸಹ ಪುಕ್ಕಟ್ಟೆ ಕಾಸಿನ ಹಿಂದೆ ಬಿದ್ದಿದ್ದಾರೆ.
ನಕಲಿ ದಾಖಲೆಗಳನ್ನು ನೀಡಿ ಪಿಂಚಣಿಪಡೆಯುತ್ತಿರುವವರ ಪತ್ತೆಗೆ ಸರ್ಕಾರ ಇದೀಗ ಬಲೆ ಬೀಸಿದೆ. ರಾಜ್ಯದಲ್ಲಿ 11.80ಲಕ್ಷ ಅನುಮಾನಾಸ್ಪದ ಪಿಂಚಣಿದಾರರಿದ್ದಾರೆ. ಅದರಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿಯೂ 11956 ನಕಲಿ ಪಿಂಚಣಿದಾರರಿದ್ದಾರೆ. ಇದರಲ್ಲಿ 351 ಮಂದಿ ಆದಾಯ ತೆರಿಗೆ ಪಾವತಿದಾರರಾಗಿದ್ದಾರೆ. ಹೀಗಾಗಿ ಪ್ರತಿಯೊಬ್ಬ ಪಿಂಚಣಿದಾರರ ನೈಜತೆ ಪರಿಶೀಲಿಸಲು ಸರ್ಕಾರ ಮುಂದಾಗಿದೆ. `ಅರ್ಹರಿಗೆ ಮಾತ್ರ ಈ ಪಿಂಚಣಿ ಸಿಗಬೇಕು’ ಎಂಬುದು ಸರ್ಕಾರದ ನಿಲುವು.
ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡಿದ್ದ ಕಂದಾಯ ಸಚಿವ ಕೃಷ್ಣ ಬೈರೆಗೌಡ ಈ ಬಗ್ಗೆ ಮಾಹಿತಿ ನೀಡಿದ್ದು, 50-55 ವಯಸ್ಸಿನವರು 60 ಎಂದು ಸುಳ್ಳು ಹೇಳುತ್ತಿರುವ ಬಗ್ಗೆ ಅಸಮಧಾನವ್ಯಕ್ತಪಡಿಸಿದರು. ಆಧಾರ್ ಕಾರ್ಡುಗಳಲ್ಲಿ 60 ಎಂದು ವಯಸ್ಸು ತಿದ್ದುಪಡಿ ಮಾಡಿ ಸರ್ಕಾರವನ್ನು ವಂಚಿಸುತ್ತಿರುವ ಪ್ರಕರಣ ಬೆಳಕಿಗೆ ಬಂದ ಬಗ್ಗೆ ಅವರು ವಿವರಿಸಿದರು. ಹೀಗಾಗಿ ಜನ್ಮ ದಾಖಲೆ ಪರಿಶೀಲಿಸಿ ಪಿಂಚಣಿ ನೀಡುವ ಬಗ್ಗೆ ತಿಳಿಸಿದರು.
ಪ್ರಾಥಮಿಕ ಮಾಹಿತಿ ಪ್ರಕಾರ ರಾಜ್ಯದಲ್ಲಿ 13702 ಮಂದಿ ಆದಾಯ ತೆರಿಗೆ ಪಾವತಿದಾರರು, 117 ಮಂದಿ ಸರಕಾರಿ ನೌಕರರು ಪಿಂಚಣಿ ಪಡೆಯುತ್ತಿದ್ದಾರೆ. ಆರೋಗ್ಯಕರವಾಗಿರುವವರು ಕೂಡಾ ವಿಕಲಚೇತನ ಪ್ರಮಾಣ ಪತ್ರ ಪಡೆದು ವಿಕಲಚೇತನರ ಪಿಂಚಣಿ ಪಡೆಯುತ್ತಿರುವ ಬಗ್ಗೆ ದೂರುಗಳಿವೆ.
Discussion about this post