ಯಲ್ಲಾಪುರ ಜಾತ್ರೆ ಅವಧಿಯಲ್ಲಿ ಪಟ್ಟಣ ಪಂಚಾಯತದಲ್ಲಿ ನಡೆದ ಅವ್ಯವಹಾರದ ಬಗ್ಗೆ ಸದಸ್ಯರು ಸಾಕಷ್ಟು ಪ್ರಮಾಣದಲ್ಲಿ ಸದ್ದು ಮಾಡಿದ ಪರಿಣಾಮ ಕಳೆದುಹೋದ ಪೆನ್ ಡ್ರೈವ್ ಸಿಕ್ಕಿದೆ. ಜಾತ್ರೆ ಅವಧಿಯಲ್ಲಿ ಜಾಗ ಹರಾಜು ಮಾಡಿದ ವಿಡಿಯೋವನ್ನು ಪ್ರದರ್ಶಿಸುವುದಾಗಿ ಪಟ್ಟಣ ಪಂಚಾಯತವೂ ಹೇಳಿಕೊಂಡಿದೆ.
ಪ ಪಂ ಸದಸ್ಯ ಸತೀಶ ನಾಯ್ಕ, ರಾಧಾಕೃಷ್ಣ ನಾಯ್ಕ ಹಾಗೂ ಸೋಮೇಶ್ವರ ನಾಯ್ಕ ಜಾತ್ರೆ ಅವಧಿಯಲ್ಲಿ ನಡೆದ ಅವ್ಯವಹಾರದ ಬಗ್ಗೆ ನಿರಂತರವಾಗಿ ಧ್ವನಿ ಎತ್ತಿದ್ದರು. ಪ ಪಂ ಅಧಿಕಾರಿ-ಸಿಬ್ಬಂದಿ ಇದರಿಂದ ಪದೇ ಪದೇ ನುಣಚಿಕೊಳ್ಳುತ್ತಿದ್ದರು. ಒಟ್ಟು 8 ಸಾಮಾನ್ಯ ಸಭೆಯಲ್ಲಿ ಅಕ್ರಮ-ಅವ್ಯವಹಾರದ ಬಗ್ಗೆ ಚರ್ಚೆ ನಡೆದರೂ ಅದಕ್ಕೆ ಅಂತ್ಯ ಸಿಕ್ಕಿರಲಿಲ್ಲ. ಜಾತ್ರೆ ಅವಧಿಯಲ್ಲಿ ಜಾಗ ಹರಾಜು ಮಾಡಿದ ಮೊತ್ತ ಹಾಗೂ ಪಟ್ಟಣ ಪಂಚಾಯತಗೆ ಪಾವತಿಯಾದ ಮೊತ್ತದ ನಡುವೆ ವ್ಯತ್ಯಾಸವಾಗಿದ್ದು, ಜಾಗ ಹರಾಜು ಮಾಡಲಾದ ದೃಶ್ಯಾವಳಿ ಚಿತ್ರಣ ಕಣ್ಮರೆಯಾಗಿತ್ತು. ಹೋರಾಟದ ನಂತರ ಅದು ಸಿಕ್ಕಿದ್ದು, ಇದೀಗ ಆ ವಿಡಿಯೋ ಪ್ರದರ್ಶಿಸುವುದಾಗಿ ಪಟ್ಟಣ ಪಂಚಾಯತವೂ ಸದಸ್ಯರಿಗೆ ಆಶ್ವಾಸನೆ ನೀಡಿದೆ.
ಆದರೆ, ಪ ಪಂ ಸದಸ್ಯ ಸೋಮೇಶ್ವರ ನಾಯ್ಕ ಪ್ರಾಜೆಕ್ಟರ್ ಮೂಲಕ ಆ ವಿಡಿಯೋ ಪ್ರದರ್ಶಿಸುವಂತೆ ಒತ್ತಾಯಿಸುತ್ತಿದ್ದಾರೆ. ಇದಕ್ಕೆ ಪಟ್ಟಣ ಪಂಚಾಯತ ಅಧಿಕಾರಿಗಳು ಒಪ್ಪುತ್ತಿಲ್ಲ. ಕಂಪ್ಯುಟರ್ ಮೂಲಕ ವಿಡಿಯೋ ಕಾಣಿಸುವುದಾಗಿ ಅಧಿಕಾರಿಗಳು ಹೇಳುತ್ತಿದ್ದು, `ಸಣ್ಣ ಪರದೆಯ ಮೂಲಕ ಎಲ್ಲರೂ ವಿಡಿಯೋ ನೋಡಲು ಅಸಾಧ್ಯ’ ಎಂಬುದು ಸದಸ್ಯರ ಆಕ್ಷೇಪ. `ಸಣ್ಣ ಪರದೆಯ ಮೇಲೆ ಮೇಲ್ನೋಟಕ್ಕೆ ವಿಡಿಯೋ ಕಾಣಿಸಿ ಪ್ರಕರಣ ಮುಚ್ಚಿಹಾಕುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಸಾಮಾನ್ಯ ಸಭೆಯಲ್ಲಿ ದೊಡ್ಡ ಪರದೆಯ ಮೂಲಕ ವಿಡಿಯೋ ಕಾಣಿಸಬೇಕು’ ಎಂದು ಸೋಮೇಶ್ವರ ನಾಯ್ಕ ಆಗ್ರಹಿಸಿದ್ದಾರೆ.
`19 ಜನ ವಾರ್ಡ ಸದಸ್ಯರಿಗೆ ಒಂದೇ ಕಂಪ್ಯುಟರ್ ಪರದೆಯಲ್ಲಿ ವಿಡಿಯೋ ಕಾಣಿಸುವುದು ಸರಿಯಲ್ಲ. ಅಧಿಕಾರಿಗಳಿಗೆ ಸಹ ಆ ವಿಡಿಯೋ ಕಾಣುವುದಿಲ್ಲ. ಹೀಗಾಗಿ ಮಾಧ್ಯಮದವರ ಮುಂದೆ ದೊಡ್ಡ ಪರದೆ ಅಳವಡಿಸಿ ಅದರಲ್ಲಿ ವಿಡಿಯೋ ಪ್ರದರ್ಶಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ. `ಪ್ರೊಜೆಕ್ಟರ್ ಅಳವಡಿಸಲು ಪಟ್ಟಣ ಪಂಚಾಯತಗೆ ಹೊರೆ ಆಗುತ್ತದೆ’ ಎಂದು ಪ ಪಂ ಸಬೂಬು ಹೇಳುತ್ತಿದ್ದು, ಪ್ರಕರಣ ಮುಚ್ಚಿಹಾಕುವ ಹುನ್ನಾರ ನಡೆದಿದೆ’ ಎಂದವರು ದೂರಿದ್ದಾರೆ.
Discussion about this post