ಎಲ್ಲೆಂದರಲ್ಲಿ ಆಸ್ತಿ-ರೆಸಾರ್ಟು ಮಾಡಿದ್ದ ಹಾವೇರಿಯ ಖ್ಯಾತ ವೈದ್ಯ ಡಾ ಬಸವರಾಜ ವೀರಾಪುರ ಅವರು ತಮ್ಮ ಬೈರುಂಬೆಯ ರೆಸಾರ್ಟಿನಲ್ಲಿ ಮೋಜು-ಮಸ್ತಿಗೆ ಅವಕಾಶ ಮಾಡಿಕೊಟ್ಟಿದ್ದು, ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದ 19 ಜನ ಪೊಲೀಸರ ಬಲೆಗೆ ಬಿದ್ದಿದ್ದಾರೆ. `ನಮ್ಮ ರೆಸಾರ್ಟಿನ ಮೇಲೆ ಯಾರೂ ದಾಳಿ ಮಾಡುವುದಿಲ್ಲ’ ಎಂದು ರೆಸಾರ್ಟ ಸಿಬ್ಬಂದಿ ಹೇಳಿದ್ದ ಮಾತು ನಂಬಿ ಅಂದರ್-ಬಾಹರ್ ಆಡಲು ಬಂದಿದ್ದ ಜನ ಇದೀಗ ಜೈಲು ಸೇರಿದ್ದಾರೆ!
ಹಾವೇರಿ ಜಿಲ್ಲೆಯ ಡಾ ಬಸವರಾಜ ವೀರಾಪುರ ಅವರು ಆ ಭಾಗದ ಖ್ಯಾತ ವೈದ್ಯರು. ವೀರಾಪುರ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯನ್ನು ಅವರು ಹೊಂದಿದ್ದರೆ. ತಮ್ಮ ದುಡಿಮೆಯ ಬಹುಪಾಲು ಹಣವನ್ನು ಅವರು ಭೂಮಿ ಮೇಲೆ ಹೂಡಿಕೆ ಮಾಡಿದ್ದು, ಹಲವು ರೆಸಾರ್ಟಗಳ ಮಾಲಕರಾಗಿದ್ದಾರೆ. ಶಿರಸಿಯ ಬೈರುಂಬೆ ಬಳಿ ಸಹ ಅವರು ರೆಸಾರ್ಟ ಹೊಂದಿದ್ದು, ಅಲ್ಲಿ ಹಾವೇರಿ ದಾವಣಗೆರೆ ಭಾಗದ ಜನ ಬಂದು ಇಸ್ಪಿಟ್ ಆಡುವುದು ಮಾಮೂಲು!
ಅದರಂತೆ ಜುಲೈ 23ರ ರಾತ್ರಿ ಹಾವೇರಿ ಡಾ ಬಸವರಾಜ ವೀರಾಪುರ ಅವರ ಮಾಲಕತ್ವದ ಬೈರುಂಬೆಯ ವಿ ಆರ್ ಆರ್ ರೆಸಾರ್ಟಿನಲ್ಲಿ ಹಾವೇರಿ ಜಿಲ್ಲೆಯ ಬೀರಪ್ಪ ಕೇರೆಗೌಡರ್, ಶಂಕರಗೌಡ ಪಾಟೀಲ, ಪ್ರದೀಪ ಅರಿಕೆರೆ, ಪ್ರಶಾಂತ ಹಸನಬಾದಿ, ರೇವಣ ಸಿದ್ದಯ್ಯ, ಪ್ರಕಾಶ ಸಿದ್ದಣ್ಣನವರ್, ಬಸವರಾಜ ತಿಮ್ಮಪ್ಪನವರ, ಈರಣ್ಣ ದಿನಕರ, ಸಂತೋಷ ರಾವತನಕೊಪ್ಪ, ವೀರಬಸಪ್ಪ ಕಾಯಕದ, ಚೇತನ ಎನ್ ಸೇರಿ ಅಂದರ್ ಬಾಹರ್ ಆಡುತ್ತಿದ್ದರು. ದಾವಣಗೆರೆಯ ಅನಿಲಕುಮಾರ, ಜಬಿಮುಲ್ಲಾ ಸಾಬ್, ಈಶ್ವರ ಬಡಿಗೇರ್, ಮಲ್ಲಿಖಾರ್ಜುನ ಸೋಮಪ್ಪ, ಬಸವರಾಜ ರಾಮಪ್ಪ, ಚಮನಸಾಬ್ ಜೊತೆ ಶಿವಮೊಗ್ಗದ ನಾಗರಾಜ ರಿತ್ತಿ ಸಹ ಅವರ ಜೊತೆ ಕೈ ಜೋಡಿಸಿದ್ದರು.
ಮುಂಡಗೋಡು ಪೊಲೀಸರಿಗೆ ಈ ಬಗ್ಗೆ ಮಾಹಿತಿ ಬಂದಿದ್ದು, ಅಲ್ಲಿನ ಅಧಿಕಾರಿಗಳು ತಮ್ಮ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದರು. ಶಿರಸಿ ಡಿವೈಎಸ್‌ಪಿ ಗೀತಾ ಪಾಟೀಲ್ ತಡರಾತ್ರಿ ಆ ರೆಸಾರ್ಟಿನ ಮೇಲೆ ದಾಳಿ ಮಾಡಿದರು. ಅಲ್ಲಿದ್ದ 19 ಜನ ಇಸ್ಪಿಟ್ ಎಲೆ ಜೊತೆ 4950436ರೂ ದುಡ್ಡಿನೊಂದಿಗೆ ಸಿಕ್ಕಿ ಬಿದ್ದರು. ರೆಸಾರ್ಟಿನಲ್ಲಿದ್ದ ಜಮಖಾನವನ್ನು ಸಹ ಬಿಡದೇ ಪೊಲೀಸರು ಜಪ್ತು ಮಾಡಿದರು. ಜೂಜುಕೋರರ 4 ಕಾರು, 18 ಮೊಬೈಲುಗಳನ್ನು ವಶಕ್ಕೆಪಡೆದರು. ಜೂಜಾಟಕ್ಕೆ ಅವಕಾಶ ಮಾಡಿಕೊಟ್ಟಿದ್ದ ಡಾ ಬಸವರಾಜ ವೀರಾಪುರ ಸೇರಿ ಎಲ್ಲಾ ಜೂಜುಕೋರರ ವಿರುದ್ಧ ಕಾನೂನು ಕ್ರಮ ಜರುಗಿಸಿದರು. ಸದ್ಯ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯ ಎಎಸ್‌ಐ ಪ್ರಕಾಶ ತಳವಾರ್ ಅವರು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
Discussion about this post