ಕರ್ನಾಟಕದ ಆನೆ ಕೇರಳಕ್ಕೆ ಹೋಗಿ ವ್ಯಕ್ತಿಯ ಸಾವಿಗೆ ಕಾರಣಗಿದ್ದ ಕಾರಣ ಸಂತ್ರಸ್ತ ಕುಟುಂಬಕ್ಕೆ ಪರಿಹಾರ ನೀಡಿದ್ದ ರಾಜ್ಯ ಸರ್ಕಾರ, ಇದೀಗ `ಬೇರೆ ರಾಜ್ಯದ ಪ್ರಾಣಿಗಳು ಕರ್ನಾಟಕ ಅರಣ್ಯ ಪ್ರದೇಶಕ್ಕೆ ಬರುವಹಾಗಿಲ್ಲ’ ಎಂಬ ನಿರ್ಬಂಧ ವಿಧಿಸಿದೆ. ಈ ಕ್ರಮವೂ ಸಾರ್ವಜನಿಕ ವಲಯದಲ್ಲಿ ನಗೆಪಾಟಲಿಗೆ ಗ್ರಾಸವಾಗಿದೆ.
ರಾಜ್ಯದ ಅರಣ್ಯ ಪ್ರದೇಶದಲ್ಲಿ ಜಾನುವಾರು ಮೇಯಿಸುವುದಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೇ ಆಕ್ಷೇಪವ್ಯಕ್ತಪಡಿಸಿದ್ದರು. ಈ ಬಗ್ಗೆ ಟಿಪ್ಪಣಿ ಹೊರಟಿಸಿದ್ದ ಅವರು ಅರಣ್ಯ ಪ್ರದೇಶದಲ್ಲಿ ಜಾನುವಾರುಗಳನ್ನು ಮೇವಿಗೆ ಬಿಡದಂತೆ ತಡೆಯಲು ಅರಣ್ಯಾಧಿಕಾರಿಗಳಿಗೆ ಸೂಚಿಸಿದ್ದರು. ಇದೀಗ ಆ ಹೇಳಿಕೆ ಹಿಂಪಡೆದು `ಜಾನುವಾರುಗಳ ನಿಷೇಧ ರಾಜ್ಯಕ್ಕೆ ಅನ್ವಯಿಸುವುದಿಲ್ಲ. ಆದರೆ, ನೆರೆ ರಾಜ್ಯದ ಜಾನುವಾರುಗಳಿಗೆ ಕರ್ನಾಟಕದ ಅರಣ್ಯ ಪ್ರವೇಶಕ್ಕೆ ಸಂಪೂರ್ಣ ನಿಷೇಧ’ ಎಂದು ಆದೇಶಿಸಿದ್ದಾರೆ.
`ಅರಣ್ಯ ಸಚಿವರ ಈ ಹೇಳಿಕೆ ಸಹ ಕಾನೂನು ಮತ್ತು ಸರ್ಕಾರದ ಆದೇಶಕ್ಕೆ ವಿರುದ್ಧ’ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ. ಕರ್ನಾಟಕ ಅರಣ್ಯ ನಿಯಮದ ಅಡಿಯಲ್ಲಿ ಮೇಯಿಸುವಿಕೆಗೆ ರಾಜ್ಯಪಾಲರ ಆದೇಶ ಅನುಸಾರ ಹಾಗೂ ಹಣಕಾಸು ಇಲಾಖೆಯ ಒಪ್ಪಿಗೆಯೊಂದಿಗೆ ಕರ್ನಾಟಕ ಸರ್ಕಾರವು 20ನೇ ಜುಲೈ 1991ರಂದು ಹೊರ ರಾಜ್ಯದ ಪ್ರಾಣಿಗಳಗೆ ರಾಜ್ಯದಲ್ಲಿ ಮೇಯಿಸುವಿಕೆಗೆ ಅವಕಾಶ ನೀಡಿದ ಆದೇಶವನ್ನು ಅವರು ಪ್ರದರ್ಶಿಸಿದ್ದಾರೆ.
`ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಅವರು ಕಾನೂನಿಗೆ ವ್ಯತಿರಿಕ್ತವಾಗಿ ಪದೇ ಪದೇ ಆದೇಶ ನೀಡುತ್ತಿದ್ದಾರೆ. ಇದರಿಂದ ರೈತರಲ್ಲಿ ಗೊಂದಲ ಉಂಟಾಗುತ್ತಿದೆ’ ಎಂದು ರವೀಂದ್ರ ನಾಯ್ಕ ಹೇಳಿದ್ದಾರೆ.
ಆನೆಗೆ 100 – ಎಮ್ಮೆಗೆ 25 ರೂಪಾಯಿ!
`ಸರ್ಕಾರದ ಆದೇಶದ ಪ್ರಕಾರ ಇತರ ರಾಜ್ಯಗಳ ಪ್ರಾಣಿಗಳನ್ನು ನಮ್ಮ ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ಮೇಯಿಸುವಿಕೆಗೆ ದರ ನಿಗದಿ ಮಾಡಲಾಗಿದೆ. ಹೊರ ರಾಜ್ಯದ ಪ್ರತಿ ಆನೆಗೆ, ಪ್ರತಿ ದಿನಕ್ಕೆ 100 ರೂಪಾಯಿ, ಒಂಟೆಗೆ ದಿನಕ್ಕೆ 50 ರೂಪಾಯಿ, ಎಮ್ಮೆಗೆ ವರ್ಷಕ್ಕೆ 25 ರೂಪಾಯಿ, ಹಸು, ಕರು, ಕತ್ತೆ, ಹೋರಿ ಮುಂತಾದ ಪ್ರಾಣಿಗಳಿಗೆ ಪ್ರತಿ ವರ್ಷ 15 ರೂ ನಿಗದಿಗೊಳಿಸಲಾಗಿದೆ’ ಎಂದವರು ಮಾಹಿತಿ ನಿಡಿದ್ದಾರೆ.
`ಟಗರು, ಕುರಿಗಳಿಗೆ ವರ್ಷಕ್ಕೆ ತಲಾ 10 ರೂಪಾಯಿ ನಿಗದಿಗೊಳಿಸಿ ಸರ್ಕಾರ 24 ವರ್ಷಗಳ ಹಿಂದೆಯೇ ಆದೇಶಿಸಿದೆ’ ಎಂಬ ಅಂಶವನ್ನು ಅವರು ಬೆಳಕಿಗೆ ತಂದಿದ್ದಾರೆ. ಜೊತೆಗೆ ಅರಣ್ಯ ಸಚಿವರಿಗೆ, ಅರಣ್ಯ ಕಾನೂನು ಮಾಹಿತಿಯಿಲ್ಲ ಎಂದು ಅವರು ಜರಿದಿದ್ದಾರೆ.
Discussion about this post