ಯಲ್ಲಾಪುರ ತಾಲೂಕಿನ ವಜ್ರಳ್ಳಿ ಗ್ರಾಮ ಪಂಚಾಯತದಲ್ಲಿ ಹಗ್ಗ ಜಗ್ಗಾಟ ಮುಂದುವರೆದಿದ್ದು, ಅದರ ಮುಂದುವರೆದ ಭಾಗವಾಗಿ ಗ್ರಾ ಪಂ ಸದಸ್ಯ ಗಣಪತಿ ಭಾಗ್ವತ ಅವರ ಸದಸ್ಯತ್ವ ರದ್ದಾಗಿದೆ. ಈ ಸದಸ್ಯತ್ವ ರದ್ಧತಿ ಬಗ್ಗೆ ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತಂದಿರುವುದಾಗಿ ಗಣಪತಿ ಭಾಗ್ವತ ಅವರು ಹೇಳಿದ್ದಾರೆ. ಜೊತೆಗೆ ಗ್ರಾ ಪಂ ಮಾಜಿ ಅಧ್ಯಕ್ಷ ಗಜಾನನ ಭಟ್ಟ ಅವರು ದ್ವೇಷ ರಾಜಕಾರಣ ಮಾಡುತ್ತಿರುವುದಾಗಿಯೂ ಆರೋಪಿಸಿದ್ದು, ಅನೇಕ ಭ್ರಷ್ಟಾಚಾರಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ, ಅದಕ್ಕೆ ಸಂಬoಧಿಸಿದ ದಾಖಲಾತಿಗಳನ್ನು ಒದಗಿಸಿಲ್ಲ.
ಯಲ್ಲಾಪುರದ ರಾಜಕೀಯ ವಿದ್ಯಮಾನಗಳ ಕೇಂದ್ರ ಸ್ಥಾನದಲ್ಲಿ ವಜ್ರಳ್ಳಿ ಭಾಗವೂ ಒಂದು. ಸಣ್ಣಪುಟ್ಟ ವಾಗ್ವಾದ, ರಾಜಕೀಯ ಕಚ್ಚಾಟ, ಹೋರಾಟ ಹಾಗೂ ಹೊಡೆದಾಟ ಇಲ್ಲಿ ಸಾಮಾನ್ಯ. ಅನೇಕ ಬಾರಿ ಅವೆಲ್ಲವೂ ಅಲ್ಲಿಯೇ ರಾಜಿ-ಪಂಚಾಯತಿಯಲ್ಲಿ ಮುಗಿದ ಉದಾಹರಣೆಗಳಿವೆ. ಆದರೆ, ಈಚೆಗೆ ಸಣ್ಣಪುಟ್ಟ ವಿಷಯಗಳು ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ಅವು ಕಾನೂನು ಹೋರಾಟಕ್ಕೆ ತಿರುಗಿವೆ. ಅದರ ಪರಿಣಾಮವಾಗಿ ಗ್ರಾ ಪಂ ಸದಸ್ಯ ಗಣಪತಿ ಭಾಗ್ವತ ಅವರ ಸದಸ್ಯತ್ವ ರದ್ಧಾಗಿದೆ.
ಗ್ರಾಮ ಪಂಚಾಯತ ಸದಸ್ಯರಾಗಿ ಗಣಪತಿ ಭಾಗ್ವತ ಅವರು ತಮ್ಮ ಮಗನ ಮೂಲಕ ಗುತ್ತಿಗೆ ಕೆಲಸ ಮಾಡಿಸಿದ್ದಾರೆ ಎಂಬುದು ಆರೋಪ. ಈ ಆರೋಪದ ಬಗ್ಗೆ ತನಿಖೆ ನಡೆಸಿದ ರಾಜ್ಯ ಪಂಚಾಯತರಾಜ್ ಇಲಾಖೆ ಅವರ ಸದಸ್ಯತ್ವ ರದ್ದು ಮಾಡಿದ್ದು, ಮುಂದಿನ 6 ವರ್ಷಗಳ ಕಾಲ ಚುನಾವಣೆಗೆ ನಿಲ್ಲದಂತೆ ಸೂಚಿಸಿದೆ. ಆದರೆ, `ತನಿಖೆಯ ವೇಳೆ ಎಲ್ಲಿಯೂ ತಮ್ಮ ಹೇಳಿಕೆಪಡೆದಿಲ್ಲ. ನಿಯಮಬಾಹಿರವಾಗಿ ಈ ಆದೇಶ ಮಾಡಲಾಗಿದ್ದು, ಅದರ ವಿರುದ್ಧ ತಡೆಯಾಜ್ಞೆ ಸಿಕ್ಕಿದೆ’ ಎಂದು ಗಣಪತಿ ಭಾಗ್ವತ ಅವರು ಹೇಳಿದ್ದಾರೆ.
`2010ರಿಂದ 2019ರ ಅವಧಿಯಲ್ಲಿ ಅವರ ಗಣಪತಿ ಭಾಗ್ವತ ಅವರ ಮಗ ಶ್ರೀರಾಮ ಭಾಗ್ವತ ಗುತ್ತಿಗೆದಾರರಾಗಿ ಅದೇ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ 8.21 ಲಕ್ಷ ರೂ ಮೊತ್ತದ ಕಾಮಗಾರಿ ನಡೆಸಿದ್ದಾರೆ. ಇದು ನಿಯಮ ಬಾಹಿರ’ ಎಂಬುದು ದೂರು. `ಗ್ರಾ ಪಂ ವ್ಯಾಪ್ತಿಯಲ್ಲಿ ಅಗತ್ಯ ಕೆಲಸಗಳು ಸಮರ್ಪಕವಾಗಿ ನಡೆಯಲೆಂದು ಆ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಗಜಾನನ ಭಟ್ಟರು ಪ್ರೋತ್ಸಾಹಿಸಿಯೇ ಶ್ರೀರಾಮ ಭಾಗ್ವತ ಅವರ ಬಳಿ ಗುತ್ತಿಗೆ ಕೆಲಸ ನಿರ್ವಹಿಸಿದ್ದಾರೆ. ಇದೀಗ ಅವರು ಅನಗತ್ಯ ಆರೋಪ ಮಾಡಿ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ’ ಎಂಬುದು ಗಣಪತಿ ಭಾಗ್ವತ ಅವರ ಅಳಲು.
`ಗ್ರಾಮದ ಅಭಿವೃದ್ಧಿಗೆ ನಮ್ಮನ್ನು ಬಳಸಿಕೊಂಡು ಇದೀಗ ಅದರ ದುರುಪಯೋಗ ನಡೆದಿದೆ. ಗ್ರಾಮ ಪಂಚಾಯತದಲ್ಲಿ ಸಾಕಷ್ಟು ಅಕ್ರಮ ಅವ್ಯವಹಾರ ನಡೆದಿದ್ದು, ಆ ಬಗ್ಗೆ ದಾಖಲೆ ಸಂಗ್ರಹಿಸಲಾಗಿದೆ. ಕೈ ಬಿಟ್ಟ ಆಸ್ತಿ ಸೇರ್ಪಡೆ, ನರೆಗಾ ಸೇರಿ ಅನೇಕ ಕಡೆ ಭ್ರಷ್ಟಾಚಾರ ನಡೆದಿದೆ. ಆ ಬಗ್ಗೆ ವಿವಿಧ ಕಡೆ ದೂರು ನೀಡಲಾಗುತ್ತದೆ’ ಎಂದು ಗಣಪತಿ ಭಾಗ್ವತ್ ಅವರು ಎಚ್ಚರಿಸಿದರು. `ತಾನೂ ಏನು ತಪ್ಪು ಮಾಡಿಲ್ಲ’ ಎಂದು ಸಮರ್ಥಿಸಿಕೊಂಡರು.
Discussion about this post