ವಿದ್ಯಾರ್ಥಿಗಳಲ್ಲಿನ ಪ್ರತಿಭಾನ್ವೇಷಣೆ, ಶಿಕ್ಷಣ ಪದ್ಧತಿಯಲ್ಲಿನ ಸುಧಾರಣೆ ಹಾಗೂ ಉತ್ತಮ ಫಲಿತಾಂಶದ ಸಾಧನೆಯ ಬಗ್ಗೆ ಕಾರವಾರ ಶೈಕ್ಷಣಿಕ ಜಿಲ್ಲೆಯ ಪ್ರೌಢಶಾಲಾ ಮುಖ್ಯಾಧ್ಯಾಪಕರು ಸಂವಾದ ನಡೆಸಿದ್ದಾರೆ. ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳ ಸಲಹೆ ಸ್ವೀಕರಿಸಿ ಈ ಬಾರಿ ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸುವ ಬಗ್ಗೆ ಶಪಥ ಮಾಡಿದ್ದಾರೆ.
ಕುಮಟಾದ ಗಿಬ್ ಹೈಸ್ಕೂಲ್ ಆವಾರದಲ್ಲಿ ಶನಿವಾರ ಪ್ರೌಢಶಾಲಾ ಮುಖ್ಯಾಧ್ಯಾಪಕರ ಸಭೆ ನಡೆದಿದ್ದು, ಅನೇಕ ಬಗೆಯ ಸಲಹೆಗಳು ಬಂದವು. ಎಲ್ಲರ ಮಾತು ಆಲಿಸಿದ ಕುಮಟಾ ಡಯೇಟ್ ಉಪನಿರ್ದೇಶಕ ಶಿವರಾಮು ಎಮ್ ಆರ್ ಅವರು `ಕಾರವಾರ ಶೈಕ್ಷಣಿಕ ಜಿಲ್ಲೆಯ ಶಿಕ್ಷಕರು ಪ್ರತಿಭಾನ್ವಿತರು. ತಮ್ಮ ಪ್ರತಿಭೆ ಮೂಲಕ ಅವರು ಮಕ್ಕಳ ಜ್ಞಾನ ಹೆಚ್ಚಿಸುತ್ತಿದ್ದು, ಈ ಬಾರಿಯೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆ ಖಚಿತ’ ಎಂಬ ವಿಶ್ವಾಸವ್ಯಕ್ತಪಡಿಸಿದರು. ಈ ವೇಳೆ ಶೇ 100ರ ಫಲಿತಾಂಶ ದಾಖಲಿಸಿದ ಶಾಲೆಗಳಿಗೆ ಅವರು ಸ್ಮರಣಿಕೆ ವಿತರಿಸಿದರು.
ಮುಖ್ಯಾಧ್ಯಾಪಕರ ಸಂಘದ ಅಧ್ಯಕ್ಷ ಎಲ್ ಎಮ್ ಹೆಗಡೆ ಅವರು ಸದ್ಯದ ಸ್ಥಿತಿಯಲ್ಲಿ ಜಾರಿಗೆ ಬಂದಿರುವ ಶಿಕ್ಷಣ ವ್ಯವಸ್ಥೆ ಹಾಗೂ ಶಿಕ್ಷಕರ ಮಾನಸಿಕ ಒತ್ತಡ ಕುರಿತು ಕಳವಳ ವ್ಯಕ್ತಪಡಿಸಿದರು. `ಶೈಕ್ಷಣಿಕ ಸುಧಾರಣೆಗೆ ನಾವೆಲ್ಲರೂ ಶ್ರಮಿಸಬೇಕಾಗಿದೆ’ ಎಂದವರು ಕರೆ ನೀಡಿದರು. ಹಿರಿಯ ಉಪನ್ಯಾಸಕರಾದ ನಾಗರಾಜ ಗೌಡ ಅವರು 2022-23 ಮತ್ತು 2023-24ನೇ ಸಾಲಿನಲ್ಲಿ ಸಾಧನೆ ಮಾಡಿದ ಶಾಲೆಗಳಿಗೆ ಸ್ಮರಣಿಕೆ ವಿತರಿಸಿದರು.
ಶಿಕ್ಷಣಾಧಿಕಾರಿ ಶುಭಾ ನಾಯಕ ಅವರು ಎಸ್ ಎಸ್ ಎಲ್ ಸಿ ಫಲಿತಾಂಶ ವಿಶ್ಲೇಷಣೆ ಹಾಗೂ ಶಿಕ್ಷಣ ಇಲಾಖೆಯ 29 ಅಂಶಗಳನ್ನು ಅನುಷ್ಠಾನಕ್ಕೆ ತರುವ ಕುರಿತು ವಿವರಿಸಿದರು. ಡಿವಾಯ್‌ಪಿಸಿ ಭಾಸ್ಕರ್ ಗಾಂವ್ಕರ ಅವರು ಇಲಾಖೆ ಸುತ್ತೋಲೆಗಳ ಬಗ್ಗೆ ಮಾಹಿತಿ ನೀಡಿದರು. ಹಿರಿಯ ಉಪನ್ಯಾಸಕಿ ಭಾರತಿ ನಾಯ್ಕ ಎಲ್ ಬಿ ಎ ಕುರಿತು ತಿಳಿಸಿದರು. ವಿನೋದ ನಾಯಕ ಸಚೇತನ ಕಾರ್ಯಕ್ರಮ ಮಾಹಿತಿ ತಿಳಿಸಿದರು.
ಪ್ರಸಕ್ತ ವರ್ಷ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನಪಡೆದ ಭಟ್ಕಳ ತಾಲೂಕಿನ ಬಿ ಇ ವೆಂಕಟೇಶ ನಾಯ್ಕ ಹಾಗೂ ಸತತ ಮೂರು ವರ್ಷಗಳಿಂದ ಶೇ 100ರ ಸಾಧನೆ ಮಾಡಿರುವ ಬೈಲೂರ, ಗುಣವಂತಿ, ಸಿವಿಎಸ್‌ಕೆ ಕುಮಟಾ ಪ್ರೌಢಶಾಲಾ ಮುಖ್ಯಾಧ್ಯಪಕರು ಅನಿಸಿಕೆವ್ಯಕ್ತಪಡಿಸಿದರು.
ಕಾರವಾರ ಡಿಡಿಪಿಐ ಲತಾ ನಾಯ್ಕ ಅವರು ಇಡೀ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಲಲಕ್ಷ್ಮೀ ಪಾಟೇಲ, ಉದಯ ನಾಯ್ಕ ಅವದಾನಿ, ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಭಾಕರ ಬಂಟ,ಸಹಶಿಕ್ಷಕರ ಸಂಘದ ಅಧ್ಯಕ್ಷ ಸುಧೀರ ನಾಯಕ, ಕುಮಟಾ ತಾಲೂಕಿನ ಮುಖ್ಯಾಧ್ಯಾಪಕ ಸಂಘದ ಅಧ್ಯಕ್ಷ ಸಿ ಜಿ ನಾಯಕ ದೊರೆ ಮತ್ತು ಗಿಬ್ ಹೈಸ್ಕೂಲ್ ಮುಖ್ಯಾಧ್ಯಪಕಿ ಗೀತಾ ಪೈ ಇದ್ದರು.
ಉತ್ತರ ಕನ್ನಡ ಜಿಲ್ಲೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನ ಬರಲು ಶ್ರಮಿಸಿದ ಕಾರವಾರ ಡಿಡಿಪಿಐ (ಆಡಳಿತ) ಲತಾ ನಾಯಕ ಹಾಗೂ ಡಿಡಿಪಿಐ ( ಅಭಿವೃದ್ಧಿ ) ಶಿವರಾಮು ಎಮ್ ಆರ್ ಅವರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಡಿ ಎಸ್ ಭಟ್, ಭಾಸ್ಕರ ಗಾಂವಕರ, ದಿನೇಶ ಪಂಡಿತ್, ಎಸ್ ಎಸ್ ಕೊರವರ, ಗಣೇಶ ಬಿಷ್ಟಣ್ಣನವರ ಇತರರು ಹಾಜರಿದ್ದು ವಿವಿಧ ಜವಾಬ್ದಾರಿ ನಿಭಾಯಿಸಿದರು.
Discussion about this post