`ಗಡಿಭಾಗದ ಕನ್ನಡ ಶಾಲೆಗಳ ಉಳಿಸುವಿಕೆಗಾಗಿ ತುರ್ತಾಗಿ ಕೆಲ ಕ್ರಮ ಕೈಗೊಳ್ಳಬೇಕು’ ಎಂದು ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಕಾರವಾರ ತಾಲೂಕು ಅಧ್ಯಕ್ಷ ಜೈ ರಂಗನಾಥ ಬಿ ಎಸ್ ಅವರು ಕನ್ನಡ ಸಾಹಿತ್ಯ ಪರಿಷತ್ತಿಗೆ ಪತ್ರ ಬರೆದಿದ್ದಾರೆ. `ಕನ್ನಡ ಉಳಿಸಲು ಕಸಾಪ ಸಾಕಷ್ಟು ಶ್ರಮಿಸುತ್ತಿದ್ದು, ಆ ಕೆಲಸವನ್ನು ಕನ್ನಡ ಶಾಲೆಗಳನ್ನು ಉಳಿಸುವ ಕಡೆಯೂ ವಿಸ್ತರಿಸಬೇಕು’ ಎಂದವರು ಅಭಿಪ್ರಾಯಪಟ್ಟಿದ್ದಾರೆ.
ಕಾರವಾರ ಸೇರಿ ಗಡಿನಾಡು ಭಾಗದಲ್ಲಿ ಕನ್ನಡ ಶಾಲೆಗಳ ಸ್ಥಿತಿ ಗಂಭಿರವಾಗಿದೆ. ವರ್ಷದಿಂದ ವರ್ಷಕ್ಕೆ ಕನ್ನಡ ಶಾಲೆ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿದೆ. ಈ ವರ್ಷ ರಾಜ್ಯದಲ್ಲಿ ಕನ್ನಡ ಮಾಧ್ಯಮದ ಪ್ರಾಥಮಿಕ ಮತ್ತು ಪ್ರೌಢ 1,349 ಶಾಲೆಗಳು ಶಾಶ್ವತವಾಮಿ ಮುಚ್ಚಲ್ಪಡುತ್ತಿರುವುದು ಆತಂಕದ ಸಂಗತಿ. 50 ವರ್ಷಗಳ ಹಿಂದೆ ಕಾರವಾರದಂಥ ಗಡಿ ನಾಡಿನಲ್ಲಿ ಕನ್ನಡ ಶಾಲೆಗಳನ್ನು ಶುರು ಮಾಡಿ ಅಕ್ಷರ ಜ್ಞಾನ ನೀಡಲಾಗುತ್ತಿದ್ದು, ಅಂಥ ಶಾಲೆಗಳನ್ನು ಉಳಿಸಿಕೊಳ್ಳುವ ಅನಿವಾರ್ಯ ಸೃಷ್ಠಿಯಾಗಿದೆ’ ಎಂದು ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ ಹೇಳಿದೆ.
ಕನ್ನಡ ಶಾಲೆಗಳ ಅಭಿವೃದ್ಧಿಗೆ ಹಿನ್ನಡೆ ಆಗಿರುವ ವಿವಿಧ ಅಂಶಗಳನ್ನು ಪಟ್ಟಿ ಮಾಡಿದ ಜೈ ರಂಗನಾಥ ಅವರು ಅದನ್ನು ಕಸಾಪ ಅಧ್ಯಕ್ಷರಿಗೆ ನೀಡಿದ್ದಾರೆ. `ಭಾಷಾ ನೀತಿಯ ನಿಯಮಗಳು ಜಾರಿಯಾಗದಿರುವುದು, ಅನುದಾನಿತ ಶಾಲೆಗಳಿಗೆ ಕನಿಷ್ಠ ಮಕ್ಕಳ 1:25 ದಾಖಲಾತಿಯ ಬಿಗಿ ನಿಯಮ ಕೈ ಕೈಗೊಂಡಿರುವುದು, ಕನ್ನಡ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಮತ್ತು ಇಲ್ಲಿ ಕಲಿಯುವ ಮಕ್ಕಳಿಗೆ ಸರ್ಕಾರದ ಶಾಲೆಗಳ ಮಕ್ಕಳಿಗೆ ನೀಡುವ ಎಲ್ಲ ಸೌಲಭ್ಯ ಒದಗಿಸುವುದು ಸೇರಿ ವಿವಿಧ ವಿಷಯಗಳ ಮೇಲೆ ಬೆಳಕು ಚೆಲ್ಲಿದ್ದಾರೆ.
`ಗಡಿನಾಡು ಪ್ರದೇಶಗಳಲ್ಲಿರುವ ಕನ್ನಡ ಮಾಧ್ಯಮ ಶಾಲೆ ಹಾಗೂ ಅಲ್ಪಸಂಖ್ಯಾತ ಶಾಲೆಗಳ ಸೌಲಭ್ಯ ಹೆಚ್ಚಿಸಬೇಕು. ಕನ್ನಡ ಶಾಲೆಗಳಿರುವ ಕಡೆ ಅನ್ಯಭಾಷೆ ಶಾಲೆಗೆ ಅನುಮತಿ ನೀಡುವಾಗ ಬಿಗಿ ನಿಯಮ ಪಾಲಿಸಬೇಕು. ಕನ್ನಡ ಕಲಿಯುವ ಮಕ್ಕಳಿಗೆ ಮೀಸಲಾತಿ ನೀಡಬೇಕು’ ಎಂಬ ಅಂಶವನ್ನು ಅವರು ವಿವರಿಸಿದ್ದಾರೆ. ಉದ್ಯೋಗ ನೇಮಕಾತಿ, ಹೋರಾಟ ವೇದಿಕೆಗಳ ಸಂಘಟನೆ, ವಿದ್ಯಾರ್ಥಿ ಪ್ರೋತ್ಸಾಹ ಸೇರಿ ಹಲವು ವಿಷಯಗಳ ಮೇಲೆ ಬೆಳಕು ಚೆಲ್ಲಿದ್ದಾರೆ.
Discussion about this post