ಶಿರಸಿ-ಹಾವೇರಿ ಹೆದ್ದಾರಿ ಕಾಮಗಾರಿಗೆ ಎದುರಾಗಿದ್ದ ಅರಣ್ಯ ತೊಡಕು ದೂರವಾಗಿದೆ. ಅದಾಗಿಯೂ ಕಾಮಗಾರಿಗೆ ವೇಗ ಸಿಕ್ಕಿಲ್ಲ.
ಈ ಹಿನ್ನಲೆ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಇನ್ನೊಂದು ಹೋರಾಟ ಶುರು ಮಾಡಿದ್ದಾರೆ. ಹೆದ್ದಾರಿ ಕಾಮಗಾರಿ ನಿರ್ವಹಿಸಬೇಕಿದ್ದ ಅಮ್ಮಾಪುರ ಕನ್ಸ್ಟ್ರಕ್ಷನ್ ಕಂಪನಿಗೆ ಯದು ದಿನ ಗಡುವು ನೀಡಿರುವ ಅವರು ರಸ್ತೆ ಗುಂಡಿ ಮುಚ್ಚದೇ ಇದ್ದರೆ ಹೈಕೋರ್ಟಿನಲ್ಲಿ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
`ಶಿರಸಿ-ಹಾವೇರಿ ಹೆದ್ದಾರಿ ಕೆಲಸಕ್ಕೆ ಮೊದಲು ಅರಣ್ಯ ಇಲಾಖೆ ಖ್ಯಾತೆ ತೆಗೆದಿತ್ತು. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅರಣ್ಯ ಇಲಾಖೆ ತಕರಾರು ಆಲಿಸಿ ಅದಕ್ಕೆ ಪರಿಹಾರ ಸೂಚಿಸಿದ್ದರು. ಅದಾಗಿಯೂ ಗುತ್ತಿಗೆ ಕಂಪನಿ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಹೀಗಾಗಿ ಇಂಥ ಕಂಪನಿಗೆ ಈ ದೇಶದಲ್ಲಿ ಎಲ್ಲಿಯೂ ಗುತ್ತಿಗೆ ಕೆಲಸ ಕೊಡಬಾರದು’ ಎಂದು ಅನಂತಮೂರ್ತಿ ಹೆಗಡೆ ಹೇಳಿದ್ದಾರೆ. `ಕಂಪನಿ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ಎಲ್ಲಾ ಬಗೆಯ ಸಿದ್ಧತೆ ನಡೆದಿದೆ. ಅದಾಗಿಯೂ ಗುಂಡಿ ಮುಚ್ಚಲು 5 ದಿನ ಸಮಯ ನೀಡಲಾಗಿದೆ’ ಎಂದವರು ವಿವರಿಸಿದರು.
`ಗುತ್ತಿಗೆ ಕಂಪನಿ ಮಾಡಿದ ತಪ್ಪಿನಿಂದ ಜನ ಸಮಸ್ಯೆ ಅನುಭವಿಸುತ್ತಿದ್ದಾರೆ. ಶಾಸಕ-ಸಂಸದರ ಮಾತನ್ನು ಕಂಪನಿ ಕೇಳುತ್ತಿಲ್ಲ. ಅಧಿಕಾರಿಗಳನ್ನು ಪ್ರಶ್ನಿಸಿದಾಗ ರಸ್ತೆ ಗುಂಡಿ ಮುಚ್ಚುವ ಫೋಟೋ ಕಳುಹಿಸುತ್ತಿದ್ದು, ಫೋಟೋ ತೆಗೆದ ಜಾಗದಲ್ಲಿಯೇ ದೊಡ್ಡ ಗುಂಡಿ ಕಾಣುತ್ತದೆ’ ಎಂದು ದೂರಿದರು. ಇದರೊಂದಿಗೆ ಶಿರಸಿ -ಹಾವೇರಿ ರಸ್ತೆಯ ಗುತ್ತಿಗೆ ಪಡೆದುಕೊಂಡಿರುವ ಅಮ್ಮಾಪುರ ಕನ್ಸ್ಟ್ರಕ್ಷನ್ ಪ್ರೈವೆಟ್ ಲಿಮಿಟೆಡ್ ಕಂಪನಿಯ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಶಿರಸಿಯ ಡಿವೈಎಸ್ಪಿ ಕಛೇರಿಯಲ್ಲಿ ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ ದೀಪನ್ ಅವರಿಗೆ ಅನಂತಮೂರ್ತಿ ಹೆಗಡೆ ಮನವಿ ಸಲ್ಲಿಸಿದರು.
Discussion about this post