ಕಳೆದ ಗುರುವಾರ ಯಲ್ಲಾಪುರದ ಗ್ರಾಮದೇವಿ ದೇವಸ್ತಾನ ರಸ್ತೆಯಲ್ಲಿರುವ ಶಿಕ್ಷಕಿ ಸುಮಂಗಲಾ ನಾಯ್ಕ ಅವರ ಮನೆಗೆ ಕನ್ನ ಹಾಕಿದ್ದ ಕಳ್ಳರು ಶನಿವಾರ ಉಮ್ಮಚ್ಗಿಯ ಶಿಕ್ಷಕಿ ಜಯಶ್ರೀ ಗಾಂವ್ಕರ್ ಅವರ ಮನೆಯಲ್ಲಿ ಕೈ ಚಳಕ ಪ್ರದರ್ಶಿಸಿದ್ದಾರೆ. ಒಂದೇ ವಾರದಲ್ಲಿ ಎರಡು ಶಿಕ್ಷಕಿಯರ ಮನೆ ಗುರಿಯಾಗಿರಿಸಿಕೊಂಡು ಚಿನ್ನಾಭರಣ ದೋಚಿರುವುದು ವಿಚಿತ್ರ.
ಜುಲೈ 17ರ ರಾತ್ರಿ ಸುಮಂಗಲಾ ನಾಯ್ಕ ಅವರ ಮನೆಯಲ್ಲಿ 1.17 ಲಕ್ಷ ರೂ ಮೌಲ್ಯದ ಆಭರಣವನ್ನು ಕಳ್ಳರು ದೋಚಿದ್ದರು. ಜುಲೈ 26ರ ಮಧ್ಯಾಹ್ನ ಜಯಶ್ರೀ ಗಾಂವ್ಕರ್ ಅವರ ಮನೆಯಲ್ಲಿ 1 ಲಕ್ಷ ರೂ ಹಣದ ಜೊತೆ 5 ಲಕ್ಷ ರೂ ಮೌಲ್ಯದ ಆಭರಣವನ್ನು ದೋಚಿ ಪರಾರಿಯಾಗಿದ್ದಾರೆ.
ಯಲ್ಲಾಪುರ ತಾಲೂಕಿನ ಉಮ್ಮಚ್ಗಿಯ ವಿದ್ಯಾಧರ ಬಡಾವಣೆಯಲ್ಲಿ ಜಯಶ್ರೀ ಗಾಂವ್ಕರ್ ಅವರು ವಾಸವಾಗಿದ್ದು, ಅವರು ಮನೆಯಲ್ಲಿ ಇಲ್ಲದ ವೇಳೆ ಕಳ್ಳರು ಮನೆಯೊಳಗೆ ನುಗ್ಗಿದ್ದಾರೆ. ಬಾಗಿಲು ಒಡೆದು ನೇರವಾಗಿ ಬೆಡ್ ರೂಮಿಗೆ ಪ್ರವೇಶಿಸಿದ ಕಳ್ಳರು ಅಲ್ಲಿದ್ದ ವಸ್ತುಗಳನ್ನು ಚಲ್ಲಾಪಿಲ್ಲಿಯಾಗಿರಿಸಿದ್ದಾರೆ. ಕೊನೆಗೆ ಕಪಾಟಿನಲ್ಲಿದ್ದ 1 ಲಕ್ಷ ರೂ ಹಣದ ಜೊತೆ ಕರಿಮಣಿ ಸರ, ಬಂಗಾರದ ಸರ, ಚಿನ್ನದ ಬಳೆ, ಚೈನು-ಲಾಕೇಟುಗಳನ್ನು ಅಪಹರಿಸಿದ್ದಾರೆ.
ಮಧ್ಯಾಹ್ನ ಮನೆಗೆ ಬಂದು ನೋಡಿದ ಶಿಕ್ಷಕಿಗೆ ಕಳ್ಳತನದ ಬಗ್ಗೆ ಅರಿವಾಗಿದ್ದು, ತಕ್ಷಣ ಅವರು ಪೊಲೀಸರಿಗೆ ಫೋನ್ ಮಾಡಿದ್ದಾರೆ. ಅದಾದ ನಂತರ ಕಳ್ಳತನವಾದ ಸಾಮಗ್ರಿಗಳ ಪಟ್ಟಿ ಮಾಡಿ ಪೊಲೀಸ್ ದೂರು ನೀಡಿದ್ದಾರೆ. ಯಲ್ಲಾಪುರ ಪೊಲೀಸ್ ಠಾಣೆಯ ಪಿಎಸ್‌ಐ ಮಹಾವೀರ ಕಾಂಬ್ಳೆ ಪ್ರಕರಣ ದಾಖಲಿಸಿಕೊಂಡಿದ್ದು, ಕಳ್ಳರ ಹುಡುಕಾಟ ಶುರು ಮಾಡಿದ್ದಾರೆ. ಪಿಐ ರಮೇಶ ಹಾನಾಪುರ, ಪಿಎಸ್‌ಐ ಯಲ್ಲಾಲಿಂಗ ಕನ್ನೂರು, ಶೇಡಜಿ ಚೌಹ್ಹಾಣ್ ಸಹ ಸ್ಥಳ ಪರಿಶೀಲನೆ ನಡೆಸಿ ಶಿಕ್ಷಕಿಗೆ ಸಾಂತ್ವಾನ ಹೇಳಿದ್ದಾರೆ. ಶೀಘ್ರದಲ್ಲಿಯೇ ಕಳ್ಳರನ್ನು ಬಂಧಿಸುವುದಾಗಿಯೂ ಪೊಲೀಸರು ಭರವಸೆ ನೀಡಿದ್ದಾರೆ
Discussion about this post