ನಿರುದ್ಯೋಗದಿಂದ ಬಳಲುತ್ತಿರುವ ಅಕ್ಕನ ಮಗನಿಗೆ ಸರ್ಕಾರಿ ನೌಕರಿ ಕೊಡಿಸಬೇಕು ಎಂದು ಅಲೆದಾಡುತ್ತಿರುವ ಹೊನ್ನಾವರದ ಪ್ರತೋಷ ಹೊಸಪಟ್ಟಣ ಅವರು ಕಾರ್ಕಳದ ಹೊಟೇಲ್ ಮಾಲಕನಿಗೆ 15 ಲಕ್ಷ ರೂ ಕೊಟ್ಟು ಮೋಸ ಹೋಗಿದ್ದಾರೆ. ಹಣಪಡೆದ ವಿಜಯಕುಮಾರ ಕೆ ಕೆಲಸವನ್ನು ಕೊಡಿಸಿಲ್ಲ.. ಹಣವನ್ನು ಮರಳಿಸಿಲ್ಲ!
ಹೊನ್ನಾವರದ ಕಾಸರಕೋಡಿನ ಪ್ರತೋಷ ಹೊಸಪಟ್ಟಣ ಅವರು ವ್ಯವಹಾರಸ್ಥರು. ಅಕ್ಕನ ಮಗನ ಬಗ್ಗೆ ಅವರಿಗೆ ಅಪಾರ ಕಾಳಜಿ. ಹೇಗಾದರೂ ಮಾಡಿ ಅಕ್ಕನ ಮಗನಿಗೆ ಸರ್ಕಾರಿ ನೌಕರಿ ಕೊಡಿಸಬೇಕು ಎಂಬುದು ಪ್ರತೋಷ ಹೊಸಪಟ್ಟಣ ಅವರ ಕನಸು. ಹೀಗಾಗಿ 2019ರಲ್ಲಿ ಬೆಂಗಳೂರಿಗೆ ಹೋಗಿದ್ದ ಅವರು ಸರ್ಕಾರಿ ನೌಕರಿಗಾಗಿ ಹುಡುಕಾಟ ನಡೆಸಿದ್ದರು. ಆಗ, ಅವರಿಗೆ ಅಲ್ಲಿ ಕಾರ್ಕಳದ ವಿಜಯಕುಮಾರ ಕೆ ಸಿಕ್ಕಿದರು.
ಕ್ಯಾಂಟೀನ್ ನಡೆಸುವ ವಿಜಯಕುಮಾರ ಕೆ ತಮ್ಮ ಬಗ್ಗೆ ತಾವೇ ಗಂಭೀರವಾಗಿ ಪರಿಚಯಿಸಿಕೊಂಡಿದ್ದರು. `ತನ್ನ ಕ್ಯಾಂಟೀನಿಗೆ ದೊಡ್ಡ ದೊಡ್ಡ ವ್ಯಕ್ತಿಗಳು ಬರುತ್ತಾರೆ. ಹಿರಿಯ ಸರ್ಕಾರಿ ಅಧಿಕಾರಿಗಳು ಇಲ್ಲಿ ಬಂದು ಚಹಾ ಕುಡಿಯುತ್ತಾರೆ. ಅವರೆಲ್ಲರೂ ತನಗೆ ತುಂಬಾ ಆಪ್ತರು’ ಎಂದು ಪುಂಗಿದ್ದರು. ಅಕ್ಕನ ಮಗನಿಗೆ ಸರ್ಕಾರಿ ನೌಕರಿ ಕೊಡಿಸುವ ಕನಸು ಕಂಡಿದ್ದ ಪ್ರತೋಷ ಹೊಸಪಟ್ಟಣ ಇದೆಲ್ಲವನ್ನು ನಂಬಿದ್ದರು.
`ನನ್ನ ಅಕ್ಕನ ಮಗನಿಗೂ ಒಂದು ಕೆಲಸ ಕೊಡಿಸಿ’ ಎಂದು ಪ್ರತೋಷ ಹೊಸಪಟ್ಟಣ ದುಂಬಾಲು ಬಿದ್ದರು. ಇದೇ ಅವಕಾಶ ಬಳಸಿಕೊಂಡ ವಿಜಯಕುಮಾರ ಕೆ 15 ಲಕ್ಷ ರೂ ಬೇಡಿದರು. `ಎಲ್ಲಾ ಹಣ ಒಟ್ಟಿಗೆ ಕೊಡಬೇಕಾಗಿಲ್ಲ’ ಎಂಬ ವಿಶೇಷ ಆಫರ್’ನ್ನು ನೀಡಿದರು. `ಉಡುಪಿ ಕಾರ್ಕಳದ ವಿಜಯಕುಮಾರ್ ಹಾಗೆಲ್ಲ ಮೋಸ ಮಾಡುವುದಿಲ್ಲ’ ಎಂದು ನಂಬಿದ ಪ್ರತೋಷ ಹೊಸಪಟ್ಟಣ ಹಂತ ಹಂತವಾಗಿ ಹಣ ಕೊಟ್ಟರು.
2020-21ರಲ್ಲಿ ಕೆಪಿಟಿಸಿಎಲ್‌ನಲ್ಲಿ ಕ್ಲರ್ಕ ಹುದ್ದೆ ಕರೆದಾಗ ಅಕ್ಕನ ಮಗನಿಂದ ಅರ್ಜಿಯನ್ನು ಹಾಕಿಸಿದರು. ಆದರೆ, ಆ ನೌಕರಿ ಪ್ರತೋಷ ಅವರ ಅಕ್ಕನ ಮಗನಿಗೆ ಸಿಗಲಿಲ್ಲ. ಇದೇ ನೌಕರಿ ಕೊಡಿಸುವುದಾಗಿ ನಂಬಿಸಿದ್ದ ವಿಜಯಕುಮಾರ ಸಹ ಕೈಗೆ ಸಿಗಲಿಲ್ಲ. 15 ಲಕ್ಷ ರೂ ಮರಳಿಸುವಂತೆ ಫೋನ್ ಮಾಡಿದರೂ ಮಾತನಾಡಲಿಲ್ಲ. ಜೋರಾಗಿ ಮಾತನಾಡಿ ಹಣ ಕೇಳಿದಾಗ ಜೀವ ಬೆದರಿಕೆ ಎದುರಿಸಿದರು. ಹೀಗಾಗಿ ಹಣವೂ ಇಲ್ಲ.. ನೌಕರಿಯೂ ಇಲ್ಲ ಎಂದು ಅಳಲು ತೋಡಿಕೊಂಡ ಪ್ರತೀಷ್ ವಂಚಕನ ವಿರುದ್ಧ ಪೊಲೀಸ್ ದೂರು ನೀಡಿದರು.
ಹೊನ್ನಾವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಂಚಕನ ವಿರುದ್ಧ ಜಾಲ ಬೀಸಿದ್ದಾರೆ. `ಸರ್ಕಾರಿ ನೌಕರಿ ಮಾರಾಟಕ್ಕಿಲ್ಲ’ ಎಂದು ಪೊಲೀಸರು ಪ್ರತೀಷ್ ಹೊಸಪಟ್ಟಣ ಅವರಿಗೆ ಬುದ್ದಿವಾದ ಹೇಳಿದ್ದಾರೆ.
Discussion about this post