`ನಾಗರ ಪಂಚಮಿ ದಿನ ಹುತ್ತಕ್ಕೆ ಹಾಲು ಎರೆಯುವ ಬದಲು ಅಶಕ್ತರಿಗೆ ಹಾಲು ಕೊಡಿ’ ಎಂದು ಸಾರಿರುವ ಅಂಕೋಲಾದ ಮಾನವ ಬಂಧುತ್ವ ವೇದಿಕೆ ಈ ಕಾರ್ಯವನ್ನು ಮಾಡಿ ತೋರಿಸಿದೆ.
`ರಾಜ್ಯದಲ್ಲಿ 40 ಸಾವಿರಕ್ಕೂ ಅಧಿಕ ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಹೀಗಿರುವಾಗ ಪ್ರತಿ ವರ್ಷ ನಾಗರ ಪಂಚಮಿ ಹೆಸರಿನಲ್ಲಿ ಅನಗತ್ಯವಾಗಿ ಪೌಷ್ಠಿಕ ಹಾಲನ್ನು ಹಾಳು ಮಾಡಲಾಗುತ್ತಿದೆ. ಹಾವು ಎಂದಿಗೂ ಹಾಲು ಕುಡಿಯುವುದಿಲ್ಲ. ಹಾಲು ಕುಡಿದ ಹಾವು ಬದುಕುವ ಸಾಧ್ಯತೆಯೂ ಇಲ್ಲ’ ಎಂದು ವೇದಿಕೆ ಸಂಚಾಲಕ ರಾಜೇಶ ನಾಯ್ಕ ಅವರು ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ.
ಇದರೊಂದಿಗೆ ಮಾನವ ಬಂಧುತ್ವ ವೇದಿಕೆ ಕಾರ್ಯಕರ್ತರು ಸೋಮವಾರ ಮಕ್ಕಳು ಹಾಗೂ ವೃದ್ಧರಿಗೆ ಹಾಲು ವಿತರಿಸಿ ಸಂಭ್ರಮಿಸಿದ್ದಾರೆ. `ಎಲ್ಲಾ ಹಬ್ಬಗಳನ್ನು ವೈಜ್ಞಾನಿಕ ರೀತಿಯಲ್ಲಿ ಆಚರಿಸಬೇಕು. ಸಾಮಾಜಿಕ ಕಳಕಳಿಯ ಆಧಾರದಲ್ಲಿ ಆಚರಣೆಗಳಿರಬೇಕು. ಆಹಾರ ನಷ್ಟ ತಪ್ಪಿಸುವ ಉದ್ದೇಶದಿಂದ ರಾಜ್ಯದ ಎಲ್ಲಡೆ ಈ ಅಭಿಯಾನ ನಡೆಸಲಾಗುತ್ತಿದೆ’ ಎಂದು ವೇದಿಕೆ ಪ್ರಮುಖರಾದ ರಾಜು ಹರಿಕಂತ್ರ ಹಾಗೂ ವಿಜಯ ಪಿಳ್ಳೆ ಮಾಹಿತಿ ನೀಡಿದರು.
`ಹಾವುಗಳ ಜೀರ್ಣಾಂಗ ವ್ಯವಸ್ಥೆಯಲ್ಲಿ ಹಾಲು ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ. ಹುತ್ತಕ್ಕೆ ಹಾಲು ಎರೆಯುವುದರಿಂದ ಜೀವಿಗೆ ಹಾನಿಯೇ ಹೆಚ್ಚು ಎಂಬುದು ದೃಢವಾಗಿದೆ. ಜನ ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳಬೇಕು’ ಎಂದು ವೇದಿಕೆಯ ಮಹೇಶ ಗೌಡ ಹಾಗೂ ಅಶೋಕ ಶೆಟಗೇರಿ ವಿವರಿಸಿದರು. ಹಾಲು ಕುಡಿದ ಮಕ್ಕಳು ಹಾಗೂ ವೃದ್ಧರು ವೇದಿಕೆ ಕಾರ್ಯವನ್ನು ಮೆಚ್ಚಿದರು.
Discussion about this post