ಗ್ರಾಮ ಪಂಚಾಯತ ಸದಸ್ಯರಾಗಿ ಪುತ್ರನ ಮೂಲಕ ಗುತ್ತಿಗೆ ಕಾಮಗಾರಿ ನಿರ್ವಹಿಸಿದ ಕಾರಣ ಯಲ್ಲಾಪುರದ ವಜ್ರಳ್ಳಿ ಗ್ರಾ ಪಂ ಸದಸ್ಯ ಜಿ ಆರ್ ಭಾಗ್ವತ್ ಅವರ ಸದಸ್ಯತ್ವ ರದ್ಧಾಗಿದೆ. ಈ ವೇಳೆ ಅವರು ಎದುರಾಳಿಗಳ ವಿರುದ್ಧ ಸಾಕಷ್ಟು ಆರೋಪ ಮಾಡಿದ್ದು, ಮಾಡಿದ ಆರೋಪಕ್ಕೆ ಅವರು ಈವರೆಗೂ ಯಾವುದೇ ದಾಖಲೆ ಒದಗಿಸಿಲ್ಲ. `ದಾಖಲೆ ಕೊಡುವೆ’ ಎಂದು ಹೇಳಿ ಹೊರಟ ಅವರು ಫೋನ್ ಕರೆಯನ್ನು ಸ್ವೀಕರಿಸುತ್ತಿಲ್ಲ!
ಯಲ್ಲಾಪುರದ ವಜ್ರಳ್ಳಿ ಭಾಗದಲ್ಲಿ ಬಿಜೆಪಿ ಸಂಘಟನೆ ಪ್ರಭಲವಾಗಿದೆ. ಎದುರಾಳಿ ಕಾಂಗ್ರೆಸ್ ಸಹ ಅಷ್ಟೇ ಘಟಾನುಘಟಿ ನಾಯಕರನ್ನು ಹೊಂದಿದೆ. ಆದರೆ, ಬಿಜೆಪಿ ಪ್ರಮುಖರಾದ ಜಿ ಆರ್ ಭಾಗ್ವತ್ ಅವರು ತಮ್ಮ ಆರೋಪಗಳಿಗೆ ಸೂಕ್ತ ದಾಖಲೆ ಒದಗಿಸುವಲ್ಲಿ ವಿಫಲರಾಗಿದ್ದಾರೆ. `ನಿಜವಾಗಿಯೂ ಭ್ರಷ್ಟಾಚಾರದ ಬಗ್ಗೆ ದಾಖಲೆಗಳಿದ್ದರೆ ಅದನ್ನು ಬಹಿರಂಗವಾಗಿ ಬಿಡುಗಡೆ ಮಾಡಬೇಕು. ಕುಮಾರಸ್ವಾಮಿ ಅವರ ಸಿಡಿ ಪ್ರಕಾರ ಮಾಧ್ಯಮ ಹೇಳಿಕೆಗಳಿಗೆ ಮಾತ್ರ ಅದು ಸೀಮಿತವಾಗಿರಬಾರದು’ ಎಂಬುದು ಅನೇಕರ ಅಭಿಪ್ರಾಯ. ದಾಖಲೆ ಒದಗಿಸದೇ ಆರೋಪ ಮಾಡಿದ ಜಿ ಆರ್ ಭಾಗ್ವತ್ ಅವರ ಕ್ರಮ ಬಿಜೆಪಿ ವಲಯದಲ್ಲಿಯೇ ಅಸಮಧಾನ ಹಾಗೂ ಅನುಮಾನಕ್ಕೆ ಕಾರಣವಾಗಿದೆ.
`ಕೈಬಿಟ್ಟು ಹೋದ ಆಸ್ತಿ ಹೊಸ ಸೇರ್ಫಡೆ ವಿಷಯದಲ್ಲಿ ಗ್ರಾ ಪಂ ಮಾಜಿ ಅಧ್ಯಕ್ಷ ಗಜಾನನ ಭಟ್ಟ ಅವರು ಪ್ರತಿಯೊಬ್ಬರಿಂದ 15ರಿಂದ 20 ಸಾವಿರ ರೂ ಹಣಪಡೆದಿದ್ದಾರೆ’ ಎಂಬುದು ಜಿ ಆರ್ ಭಾಗ್ವತ್ ಅವರು ಮಾಡಿದ ಮೊದಲ ಆರೋಪ. `ಒಂದೇ ರಸ್ತೆಗೆ ಪದೇ ಪದೇ ಬಿಲ್ ಮಾಡಿ ಹಣ ಹೊಡೆಯಲಾಗಿದೆ’ ಎಂಬುದು ಅವರ ಮತ್ತೊಂದು ಆರೋಪ. ಗ್ರಾ ಪಂ ಸದಸ್ಯೆ ರತ್ನಾ ಬಾಂದೇಕರ್ ಅವರು ನರೆಗಾ ಕೆಲಸದಲ್ಲಿ ಅವ್ಯವಹಾರ ನಡೆಸುತ್ತಿದ್ದಾರೆ’ ಎಂದು ಸಹ ಜಿ ಆರ್ ಭಾಗ್ವತ್ ಅವರು ದೂರಿದ್ದಾರೆ. ಇದರೊಂದಿಗೆ ಗ್ರಾಮ ಪಂಚಾಯತಗೆ ಅರಿವಿಲ್ಲದೇ, ನಕಲಿ ದಾಖಲೆಗಳ ಮೂಲಕ ಅವರು ಕೇಂದ್ರ ಸರ್ಕಾರದ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿರುವ ಬಗ್ಗೆಯೂ ಆರೋಪಿಸಿದ್ದಾರೆ. `ತಮ್ಮ ಬಳಿ ದಾಖಲೆಗಳಿವೆ’ ಎಂದಿರುವ ಅವರು ಅದನ್ನು ಬಹಿರಂಗಪಡಿಸುವoತೆ ಪದೇ ಪದೇ ಪ್ರಶ್ನಿಸಿದರೂ ಹೊರ ಹಾಕಿಲ್ಲ.
`ಜಿ ಆರ್ ಭಾಗ್ವತ್ ಒಳ್ಳೆಯ ಮನುಷ್ಯ. ದಾಖಲೆಗಳಿಲ್ಲದೇ ಅವರು ಏನನ್ನು ಮಾತನಾಡುವುದಿಲ್ಲ’ ಎಂದು ಅವರ ಬೆಂಬಲಿಗರು ಹೇಳುತ್ತಾರೆ. `ತಮ್ಮ ಅಪರಾತಪರ ಮುಚ್ಚಿಕೊಳ್ಳುವುದಕ್ಕಾಗಿ ಜಿ ಆರ್ ಭಾಗ್ವತ್ ಅವರು ಎದುರಾಳಿಗಳ ವಿರುದ್ಧ ಆರೋಪ ಮಾಡುತ್ತಿದ್ದಾರೆ’ ಎಂದು ಅವರ ಎದುರಾಳಿ ಬಣದವರು ಹೇಳುತ್ತಿದ್ದಾರೆ. ಭ್ರಷ್ಟಾಚಾರ, ಅವ್ಯವಹಾರ, ಇನ್ನಿತರ ಗ್ರಾ ಪಂ ಸದಸ್ಯರ ಅಕ್ರಮಗಳ ಬಗ್ಗೆ ಜಿ ಆರ್ ಭಾಗ್ವತ ಅವರು ಮಾಡಿದ ಆರೋಪಗಳೆಲ್ಲವೂ ಗಂಭೀರ ಪ್ರಮಾಣದಲ್ಲಿವೆ. ಹೀಗಾಗಿ ಈ ಬಗ್ಗೆ ಅವರು ಲೋಕಾಯುಕ್ತ ದೂರು ನೀಡಲು ಅರ್ಹರಾಗಿದ್ದು, ಅಕ್ರಮಗಳ ಬಗ್ಗೆ ಈವರೆಗೂ ಅವರು ಯಾವುದೇ ದೂರು ದಾಖಲಿಸಿಲ್ಲ. ಅಕ್ರಮ-ಅವ್ಯವಹಾರಗಳನ್ನು ಬಹಿರಂಗಪಡಿಸುವುದಾಗಿ ಮಾಧ್ಯಮಗಳ ಮುಂದೆ ಸಿಡಿದೆದ್ದ ಅವರು ನಂತರ ಮೌನಕ್ಕೆ ಶರಣಾಗಿರುವುದು ಚರ್ಚೆಗೆ ಗ್ರಾಸವಾಗಿದೆ.
ಅಕ್ರಮ ಅವ್ಯವಹಾರ ಹಾಗೂ ಭ್ರಷ್ಟಾಚಾರದ ಬಗ್ಗೆ ಈ ಮೊದಲೇ ಮಾಹಿತಿಯಿದ್ದರೂ ಇಷ್ಟು ದಿನಗಳ ಕಾಲ ಜಿ ಆರ್ ಭಾಗ್ವತ್ ಅವರು ಅದನ್ನು ಸಹಿಸಿಕೊಂಡಿದ್ದು ಏಕೆ? ಆ ಬಗ್ಗೆ ಮೊದಲೇ ಧ್ವನಿ ಎತ್ತದಿರುವುದು ಏತಕೆ? ಎಂಬ ಪ್ರಶ್ನೆಯೂ ಹಾಗೇ ಉಳಿದಿದೆ.
Discussion about this post