ಪ್ರತಿ ವರ್ಷದಂತೆ ಈ ವರ್ಷವೂ ಕಾರವಾರದ ಜನಶಕ್ತಿ ವೇದಿಕೆಯವರು ಆಶಾನಿಕೇತನ ಕಿವುಡ ಹಾಗೂ ಮೂಗ ಮಕ್ಕಳ ಶಾಲಾ ಮಕ್ಕಳಿಗೆ ಹಾಲು ಕೊಡುವುದರ ಮೂಲಕ ನಾಗರ ಪಂಚಮಿ ಹಬ್ಬ ಆಚರಿಸಿದರು.
ಹಾವುಗಳ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಮಾಧವ ನಾಯಕ ಅವರ ಸಹೋದರ ಮಹೇಶ್ ನಾಯ್ಕ ಅವರು ಪ್ರತ್ಯಕ್ಷ ನಾಗರ ಹಾವುಗಳನ್ನು ಶಾಲೆಗೆ ತಂದು ಮಕ್ಕಳಿಗೆ ಅರಿವು ಮೂಡಿಸಿದರು.
ಈ ವೇಳೆ ಮಾತನಾಡಿದ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ `ನಾಗರ ಪಂಚಮಿಯನ್ನು ಧಾರ್ಮಿಕವಾಗಿ ಶ್ರದ್ಧಾ ಭಕ್ತಿಯಿಂದ ಆಚರಿಸಬೇಕು. ಆದರೆ, ಅದೇ ನೆಪದಲ್ಲಿ ಹುತ್ತಕ್ಕೆ ಹಾಲು ಎರೆದು ವ್ಯರ್ಥ ಮಾಡುವುದರ ಜೊತೆಗೆ ದೇವರೆಂದು ಪೂಜಿಸುವ ನಾಗರ ಹಾವುಗಳಿಗೂ ತೊಂದರೆ ನೀಡುತ್ತಿದ್ದೇವೆ. ಭಕ್ತರ ನಂಬಿಕೆಗಳನ್ನು ವಿರೋಧಿಸುವುದು ನಮ್ಮ ಉದ್ದೇಶವಲ್ಲ. ಹುತ್ತಕ್ಕೆ ಎರೆಯುವ ಹಾಲು ಅನಾವಶ್ಯಕವಾಗಿ ವ್ಯರ್ಥವಾಗುತ್ತಿದೆ’ ಎಂದರು. `ಕಳೆದ 15 ವರ್ಷಗಳಿಂದ ನಿರ್ಗತಿಕರು, ಅನಾಥರು, ಇಂಥ ವಿಶೇಷಚೇತನ ಮಕ್ಕಳಿಗೆ ಹಾಲು- ಸಿಹಿ ನೀಡುವ ಮೂಲಕ ನಾಗರ ಪಂಚಮಿ ಆಚರಿಸುತ್ತಿದ್ದೇವೆ’ ಎಂದು ವಿವರಿಸಿದರು.
`ಸಚಿವರಾದ ಸತೀಶ್ ಜಾರಕಿಹೊಳಿ ಅವರು ತಮ್ಮ ಕ್ಷೇತ್ರದಲ್ಲಿ ಮೂಢನಂಬಿಕೆಗಳನ್ನು ವಿರೋಧಿಸಿ ಆಚರಿಸುತ್ತಿದ್ದ ಆಚರಣೆಗಳಿಂದ ಪ್ರೇರಿತರಾಗಿ ಈ ಸಾಮಾಜಿಕ ಕಾರ್ಯವನ್ನು ನಡೆಸಿಕೊಂಡು ಬರುತ್ತಿದ್ದೇವೆ’ ಎಂದವರು ತಿಳಿಸಿದರು. `ಸಾಮಾಜಿಕ ಕಾರ್ಯಗಳಿಂದ ಸಮಾಜಕ್ಕೆ ಉತ್ತಮ ಸಂದೇಶ ರವಾನೆಯಾಗಲಿದೆ. ಜನಶಕ್ತಿ ವೇದಿಕೆಯ ಇಂಥ ಕಾರ್ಯಗಳು ಇತರರಿಗೆ ಮಾದರಿಯಾಗಲಿ’ ಎಂದು ಡಿವೈಎಸ್ಪಿ ಗಿರೀಶ್ ಈ ವೇಳೆ ಹೇಳಿದರು.
ವೇದಿಕೆಯ ಕಾರ್ಯದರ್ಶಿ ರಾಮ ನಾಯ್ಕ, ಸ್ಟೆರ್ ಎಲಿಜಾ ಮತ್ತಿತರರು ಇದ್ದರು.
ಜನಶಕ್ತಿ ವೇದಿಕೆಯವರು ಮಕ್ಕಳಿಗೆ ಹಾಲುಣಿಸಿದ ವಿಡಿಯೋ ಇಲ್ಲಿ ನೋಡಿ..
Discussion about this post