ಇತರರ ಮಕ್ಕಳನ್ನು ತಮ್ಮ ಮಕ್ಕಳಂತೆಯೇ ಪ್ರೀತಿ-ವಾತ್ಸಲ್ಯದಿಂದ ನೋಡಿಕೊಳ್ಳುತ್ತಿದ್ದ ಶಿರಸಿಯ ಶಿಕ್ಷಕಿ ಸವಿತಾ ಗೌಡ ಅವರು ಬೈಕಿನಿಂದ ಬಿದ್ದು ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸೇರಿಸುವುದರೊಳಗೆ ಸಾವನಪ್ಪಿದ್ದಾರೆ.
ಶಿರಸಿ ಬನವಾಸಿ ರಸ್ತೆಯ ಶ್ರೀನಗರ ಸರಕಾರಿ ಶಾಲೆಯಲ್ಲಿ ಸವಿತಾ ಗೌಡ ಅವರು ಶಿಕ್ಷಕಿಯಾಗಿದ್ದರು. ಅನೇಕ ವರ್ಷಗಳಿಂದ ಅವರು ಶಿಕ್ಷಣ ಇಲಾಖೆಯ ಸೇವೆಯಲ್ಲಿದ್ದರು. ನೂರಾರು ಮಕ್ಕಳಿಗೆ ಪಾಠ ಕಲಿಸಿದ್ದ ಅವರು ಅಡ್ಡದಾರಿ ಹಿಡಿಯುತ್ತಿದ್ದ ಮಕ್ಕಳನ್ನು ತಿದ್ದಿ-ತೀಡಿ ಮುಖ್ಯವಾಹಿನಿಗೆ ತಂದಿದ್ದರು. ಪಠ್ಯದ ಜೊತೆ ಪಠ್ಯೆತರ ಚಟುವಟಿಕೆಗಳಲ್ಲಿ ಸಹ ಮಕ್ಕಳು ಭಾಗವಹಿಸುವಂತೆ ಪ್ರೇರೇಪಿಸುತ್ತಿದ್ದರು. ಶಿಕ್ಷಣ ಇಲಾಖೆ ನೀಡಿದ ಕೆಲಸಗಳನ್ನು ಸಹ ಅವರು ಅತ್ಯಂತ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದರು.
ಬಿಳೂರು ಸರಕಾರಿ ಪ್ರೌಢ ಶಾಲೆಯ ಶಿಕ್ಷಕರಾಗಿರುವ ಪತಿ ಮಂಜುನಾಥ ಗೌಡ ಅವರ ಜೊತೆ ಸವಿತಾ ಗೌಡ ಅವರು ಮಂಗಳವಾರ ಮಂಚಗುಣಿ ದೇವಾಲಯಕ್ಕೆ ಹೋಗಿದ್ದರು. ದೇವರಿಗೆ ಕೈ ಮುಗಿದು ಮಧ್ಯಾಹ್ನದ ವೇಳೆ ಬೈಕಿನಲ್ಲಿ ಮರಳುತ್ತಿದ್ದರು. ಆಗ, ಒಮ್ಮೆಲೆ ಮಳೆ ಬಂದಿದ್ದು ಬೈಕ್ ಸಂಚರಿಸುವಾಗಲೇ ಬ್ಯಾಗಿನಿಂದ ಕೊಡೆ ಹೊರ ತೆಗೆದರು. ಕೊಡೆ ಬಿಡಿಸುವಾಗ ಗಾಳಿ ಬೀಸಿದ್ದು, ಕೊಡೆಯ ಜೊತೆ ಆಯತಪ್ಪಿ ಬೈಕಿನಿಂದ ಕೆಳಗೆ ಬಿದ್ದರು.
ಬೈಕಿನಿಂದ ಬಿದ್ದ ಸವಿತಾ ಗೌಡ ಅವರ ತಲೆಗೆ ಕಲ್ಲು ಬಡಿಯಿತು. ಪರಿಣಮ ಅವರಿಗೆ ಗಂಭೀರ ಪ್ರಮಾಣದಲ್ಲಿ ಪೆಟ್ಟಾಯಿತು. ಜೊತೆಗಿದ್ದ ಮಂಜುನಾಥ ಗೌಡ ಅವರು ಪತ್ನಿಯನ್ನು ಬದುಕಿಸಿಕೊಳ್ಳಲು ಹರಸಾಹಸ ನಡೆಸಿದರು. ಅಮಿನಳ್ಳಿ ಬಳಿ ದುರಂತ ನಡೆದಿದ್ದು, ಅವರಿವರನ್ನು ಕಾಡಿಬೇಡಿ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿದರು.
ಅದೇ ಮಾರ್ಗದಲ್ಲಿ ತೆರಳುತ್ತಿದ್ದ ಆರಿಫ್ ಖಾನ್ ಅವರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಸವಿತಾ ಗೌಡ ಅವರನ್ನು ತಮ್ಮ ಕಾರಿಗೆ ಹತ್ತಿಸಿದರು. ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಧಾರವಾಡಕ್ಕೆ ಕರೆದೊಯ್ಯುವ ಪ್ರಯತ್ನ ನಡೆಯಿತು. ಆದರೆ, ಅದರಿಂದ ಯಾವುದೇ ಪ್ರಯೋಜನ ಆಗಲಿಲ್ಲ. ಅರ್ದದಾರಿಯಲ್ಲಿಯೇ ಸವಿತಾ ಗೌಡ ಅವರ ಪ್ರಾಣ ಹಾರಿ ಹೋಯಿತು.
Discussion about this post