`ಕನಿಷ್ಟ ವೇತನವನ್ನು ನೀಡದೇ ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿರುವ ಕಂಪನಿ ವಿರುದ್ಧ ಕಾರ್ಮಿಕರು ಧೈರ್ಯದಿಂದ ದೂರು ಕೊಡಬೇಕು’ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಕರೆ ನೀಡಿದ್ದಾರೆ. `ಹೊರೆ ಗುತ್ತಿಗೆ ನೌಕರರ ಹಿತಾಸಕ್ತಿ ಕಾಪಾಡಲು ತಾವು ಬದ್ಧ’ ಎಂದವರು ಭರವಸೆ ನೀಡಿದ್ದಾರೆ.
ಮಂಗಳವಾರ ಕಾರವಾರದ ಅಜ್ಜಿ ಓಷಿಯನ್ ಹೋಟೆಲ್ ಸಭಾಂಗಣದಲ್ಲಿ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಿಸಿದ ಅವರು ಕಾರ್ಮಿಕ ಯೋಜನೆಗಳ ಬಗ್ಗೆ ಅರಿವು ಮೂಡಿಸಿದರು. ಇದರೊಂದಿಗೆ `ಅಸಂಘಟಿತ ಕಾರ್ಮಿಕರಿಗೆ ಹೆಚ್ಚಿನ ಸಂಖ್ಯೆಯ ಸಾಮಾಜಿಕ ಭದ್ರತೆ ಯೋಜನೆ ಒದಗಿಸಲು ಇಂಧನಗಳ ಮೇಲಿನ ಸುಂಕದ ಅಲ್ಪ ಮೊತ್ತವನ್ನು ಕಾರ್ಮಿಕ ಮಂಡಳಿಗೆ ನೀಡುವ ಬಗ್ಗೆ ಮುಖ್ಯಮಂತ್ರಿಗಳ ಬಳಿ ಮನವಿ ಮಾಡುವೆ’ ಎಂದು ಘೋಷಿಸಿದರು.
`ಕಾರ್ಮಿಕರ ಮಕ್ಕಳಿಗಾಗಿ 6ರಿಂದ 12 ತರಗತಿಯವರಿಗೆ ಉಚಿತ ಶಿಕ್ಷಣ ನಿಡುವ ಶಾಲೆಗಳನ್ನು ತೆರೆಯಲಾಗುತ್ತಿದೆ. ಪ್ರತಿ ಜಿಲ್ಲೆಯಲ್ಲಿಯೂ ಒಂದು ಶಾಳೆ ತೆರೆಯುವ ಬಗ್ಗೆ ಚಿಂತಿಸಲಾಗಿದೆ’ ಎಂದರು. `ಸರ್ಕಾರ ಕನಿಷ್ಠ ವೇತನ ಪಾವತಿಯನ್ನು ಕಡ್ಡಾಯಗೊಳಿಸಿದ್ದು, ಈ ಬಗ್ಗೆ ದೂರುಗಳಿದ್ದಲ್ಲಿ ಲಿಖಿತವಾಗಿ ನೇರವಾಗಿ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಸಲ್ಲಿಸಬೇಕು’ ಎಂದು ಕರೆ ನೀಡಿದರು. `ರಾಜ್ಯದಲ್ಲಿನ ಸರ್ಕಾರಿ ಇಲಾಖೆಗಳಲ್ಲಿನ ಹೊರಗುತ್ತಿಗೆ ನೌಕರರ ನೇಮಕಾತಿಗಾಗಿ ಜಿಲ್ಲಾ ಮಟ್ಟದಲ್ಲಿ ಸೊಸೈಟಿಗಳನ್ನು ರಚಿಸಲಾಗುತ್ತಿದೆ. ನಿರ್ದಿಷ್ಟ ಅವಧಿಗೆ ಸೇವೆ ಸಲ್ಲಿಸಿದ ನೌಕರರರಿಗೆ ಗ್ಯಾಚ್ಯುಯಿಟಿ ಮತ್ತು ಕಡ್ಡಾಯವಾಗಿ ವಿಮೆ ಮಾಡಿಸುವ ಕುರಿತಂತೆ ನಿಯಮಗಳನ್ನು ರೂಪಿಸಲಾಗುತ್ತಿದ್ದು, ರಾಜ್ಯದಲ್ಲಿ ಕಾರ್ಮಿಕರ ಅಭಿವೃಧ್ದಿಗೆ ಪೂರಕವಾದ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ’ ಎಂದವರು ವಿವರಿಸಿದರು.
`ಅಸಂಘಟಿತ ವಲಯದ ಕಾರ್ಮಿಕರು ಆರ್ಥಿಕ ಮತ್ತು ಸಾಮಾಜಿಕವಾಗಿ ದುರ್ಬಲರಾಗಿದ್ದಾರೆ. ಸಂಘಟಿತ ಕಾರ್ಮಿಕರಿಗೆ ದೊರೆಯುವ ಹಲವು ಸೌಲಭ್ಯಗಳಿಂದ ವಂಚಿತರಾಗಿದ್ದು, ಇವರಿಗೆ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಮೂಲಕ ಸಾಮಾಜಿಕ ಭದ್ರತಾ ಯೋಜನೆಗಳನ್ನು ಅನುಷ್ಠಾನಗೊಳಿಸಿಸಲಾಗಿದೆ. ಈಗಾಗಲೇ ಅಂಬೇಡ್ಕರ್ ಸಹಾಯ ಹಸ್ತ ಯೋಜನೆ, ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆ, ದಿನಪತ್ರಿಕೆ ವಿತರಣಾ ಕಾರ್ಮಿಕರ ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯ ಯೋಜನೆಗಳಿವೆ. ದೇಶದಲ್ಲೇ ಪ್ರಥಮ ಬಾರಿಗೆ ಇ ಕಾಮರ್ಸ್ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗಾಗಿ ಕಾರ್ಮಿಕರ ವಿಮಾ ಯೋಜನೆಯನ್ನು ಜಾರಿಗೊಳಿಸಲಾಗಿದೆ’ ಎಂದರು.
ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ ಮಾತನಾಡಿ `ಕಾರ್ಮಿಕ ಇಲಾಖೆ ಈ ಮೊದಲು ಕಟ್ಟಡ ಕಾರ್ಮಿಕರಿಗೆ ಮಾತ್ರ ಎಂಬAತೆ ಇದ್ದು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಣ್ಣ ಸಣ್ಣ ವೃತ್ತಿಗಳನ್ನು ಮಾಡುತ್ತಿದ್ದ 90 ಕ್ಕೂ ಅಧಿಕ ವರ್ಗದ ಕಾರ್ಮಿಕರಿಗೆ ವಿವಿಧ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ. ಸಾಮಾನ್ಯರು, ಬಡವರು ಮತ್ತು ಕಾರ್ಮಿಕರ ಪರವಾಗಿ ಸರ್ಕಾರ ಕಾರ್ಯನಿರ್ವಹಿಸುತ್ತಿದ್ದು, ಜನಪರ ಯೋಜನೆಗಳಿಗಾಗಿ ರಾಜ್ಯದಲ್ಲಿ ಹಣಕಾಸಿನ ಯಾವುದೇ ಕೊರತೆ ಇಲ್ಲ’ ಎಂದರು. ಶಾಸಕ ಸತೀಶ್ ಸೈಲ್ ಮಾತನಾಡಿ ಕಾರವಾರದಲ್ಲಿ ಕೈಗಾ, ಸೀಬರ್ಡ್ ಸೇರಿದಂತೆ 10,000 ಕ್ಕೂ ಅಧಿಕ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು ಜಿಲ್ಲೆಗೆ ಪ್ರತ್ಯೇಕ ಇ.ಎಸ್.ಐ ಆಸ್ಪತ್ರೆ ಮಂಜೂರು ಮಾಡುವಂತೆ ಮನವಿ ಮಾಡಿದರು.
ಕೇರಳದ ಮಂಜೇಶ್ವರ ಶಾಸಕ ಅಶ್ರಫ್, ನಗರಸಭೆ ಅಧ್ಯಕ್ಷ ರವಿರಾಜ್ ಅಂಕೋಲೆಕರ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ್ ನಾಯ್ಕ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಾಜೇಂದ್ರ ರಾಣೆ, ಜಿಲ್ಲಾಧಿಕಾರಿ ಕೆ ಲಕ್ಷಿಪ್ರಿಯಾ, ಜಿ ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ದಿಲೀಷ್ ಶಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್, ಧಾರವಾಡ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತ ಸಚಿನ್ ವೈ ಹಳೇಮನಿ, ಅಸಂಘಟಿತ ಕಾರ್ಮಿಕ ಮಂಡಳಿಯ ಸಹಾಯಕ ಕಾರ್ಮಿಕ ಆಯುಕ್ತೆ ಮೀನಾ ಪಾಟೀಲ್, ಬೆಳಗಾವಿ ವಿಭಾಗದ ಉಪ ಕಾರ್ಮಿಕ ಆಯುಕ್ತ ನಾಗೇಶ್, ಜಿಲ್ಲಾ ಕಾರ್ಮಿಕ ಅಧಿಕಾರಿ ಲಲಿತಾ ಸಾತೇನಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.
Discussion about this post