ಬ್ಯಾಂಕ್ ಖಾತೆಯಲ್ಲಿ ಕೋಟಿ ಹಣವಿಟ್ಟುಕೊಂಡಿದ್ದ ಅಡಿಕೆ ವ್ಯಾಪಾರಿ ರವೀಂದ್ರ ಹೆಗಡೆ ಪೊಲೀಸರಿಗೆ ಬೆದರಿ ಆ ಹಣ ಕಳೆದುಕೊಂಡಿದ್ದಾರೆ. `ಕಪ್ಪು ಹಣ ವರ್ಗಾವಣೆ ವಿಷಯದಲ್ಲಿ ನಿಮ್ಮನ್ನು ಬಂದಿಸುತ್ತೇವೆ’ ಎಂಬ ಅಪರಿಚಿತ ಕರೆಯೊಂದು ಅವರ ಮೂರು ಬ್ಯಾಂಕಿನ ಖಾತೆಯನ್ನು ಖಾಲಿ ಮಾಡಿದೆ.
ಶಿರಸಿ ಪ್ರಗತಿನಗರದ ರವೀಂದ್ರ ಹೆಗಡೆ ಅವರು ಅಡಿಕೆ ವ್ಯಾಪಾರ ಮಾಡಿಕೊಂಡಿದ್ದರು. ಕಾನೂನುಬದ್ಧವಾಗಿಯೇ ಅವರು ವ್ಯಾಪಾರ-ವಹಿವಾಟು ನಡೆಸುತ್ತಿದ್ದರು ಕಣ್ತಪ್ಪಿನಿಂದ ಸಣ್ಣಪುಟ್ಟ ಪ್ರಮಾದಗಳು ನಡೆಯುತ್ತಿದ್ದವು. ಹೀಗಾಗಿ ಅವರು ಮೊದಲಿನಿಂದಲೂ ಆತಂಕದಲ್ಲಿಯೇ ವಹಿವಾಟು ಮಾಡುತ್ತಿದ್ದರು.
ಈ ನಡುವೆ ಸಂಜಯ ಎಂಬ ಹೆಸರಿನಿಂದ ಫೋನ್ ಅವರಿಗೆ ಫೋನ್ ಬಂದಿತು. `ತಾನು ಮುಂಬೈ ಪೊಲೀಸ್’ ಎಂದು ಪರಿಚಯಿಸಿಕೊಂಡ ಸಂಜಯ್ ಕಪ್ಪು ಹಣ ವ್ಯವಹಾರದ ಬಗ್ಗೆ ಮಾತನಾಡಿದರು. ರವೀಂದ್ರ ಹೆಗಡೆ ಅವರ ಬಳಿ `ಮುಂಬೈನ ಕೊಲಬಾದಲ್ಲಿ ನಿಮ್ಮ ಹೆಸರಿನಲ್ಲಿ ಬ್ಯಾಂಕ್ ಖಾತೆಯಿದ್ದು, ಅದಕ್ಕೆ ಕಪ್ಪು ಹಣ ವರ್ಗಾವಣೆಯಾಗಿದೆ. ಜಟ್ ಎರಿವೆಸನ್ ಮನಿಷ್ ಗೊಯಲ್ ಎಂಬಾತರಿAದ ಹಣ ವರ್ಗಾವಣೆಯಾಗಿದ್ದರಿಂದ ನಿಮ್ಮನ್ನು ಬಂಧಿಸಲಾಗುತ್ತದೆ’ ಎಂದು ಬೆದರಿಸಿದರು.
ಮುಂಬೈ ಪೊಲೀಸರ ಹೆಸರು ಕೇಳಿದ ಕೂಡಲೇ ಬೆದರಿದ್ದ ರವೀಂದ್ರ ಹೆಗಡೆ ಅವರಿಗೆ ಸಂಜಯ್ ಇನ್ನಷ್ಟು ಭಯಪಡಿಸಿದರು. `ಇಡಿ ಅವರಿಗೆ ಮಾಹಿತಿ ನೀಡಿ ನಿಮ್ಮನ್ನು ಇನ್ನಷ್ಟು ಸಂಕಷ್ಟಕ್ಕೆ ತರುತ್ತೇವೆ’ ಎಂದು ಹೇಳಿದಾಗ ರವೀಂದ್ರ ಹೆಗಡೆ ಇನ್ನಷ್ಟು ಕುಗ್ಗಿದರು. ಅದೂ-ಇದು ಮಾತುಕಥೆ ನಂತರ ಕೊನೆಗೆ ಸಂಜಯ್ ಲಂಚಕ್ಕೆ ಕೈ ಚಾಚಿದ್ದು, ರವೀಂದ್ರ ಹೆಗಡೆ ಅವರು ತಮ್ಮ ಶಿರಸಿಯ ಕೆನರಾ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಸಂಜಯ್ ಹೇಳಿದ ಖಾತೆಗೆ ವರ್ಗಾಯಿಸಿದರು. ಅದು ಸಾಲದಿದ್ದಾಗ ಎಸ್‌ಬಿಐ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಲಂಚವಾಗಿ ನೀಡಿದರು.
ಅದಕ್ಕೆ ಸಹ ಸಂಜಯ್ ನಿಲ್ಲದೇ ಇದ್ದಾಗ ಕರ್ಣಾಟಕ ಬ್ಯಾಂಕಿನಲ್ಲಿದ್ದ ಉಳಿತಾಯದ ಹಣವನ್ನು ಸಂಜಯ್ ಸೂಚಿಸಿದ ಬ್ಯಾಂಕ್ ಖಾತೆಗೆ ರವಾನಿಸಿದರು. ಇದಾದ ನಂತರ ಆ ಸಂಜಯ್ ಪೊಲೀಸ್ ಅಧಿಕಾರಿಯೇ ಅಲ್ಲ ಎಂಬ ವಿಷಯ ರವೀಂದ್ರ ಹೆಗಡೆ ಅವರ ಅರಿವಿಗೆ ಬಂದಿತು. ಆದರೆ, ಅಷ್ಟರೊಳಗೆ ರವೀಂದ್ರ ಹೆಗಡೆ ಅವರ ಬ್ಯಾಂಕ್ ಖಾತೆಯಲ್ಲಿದ್ದ 89.30 ಲಕ್ಷ ರೂ ವಂಚಕರ ಕೈ ಸೇರಿತ್ತು.
ಹಣ ಕಳೆದುಕೊಂಡ ನೋವಿನಲ್ಲಿದ್ದ ರವೀಂದ್ರ ಹೆಗಡೆ ಅವರಿಗೆ ಕುಟುಂಬದವರು ಸಮಾಧಾನ ಮಾಡಿದರು. ಮಾಹಿತಿ ತಂತ್ರಜ್ಞಾನ ದುರುಪಯೋಗಪಡಿಸಿಕೊಂಡು ವಂಚನೆ ಮಾಡಿದ ಬಗ್ಗೆ ಪೊಲೀಸ್ ದೂರು ನೀಡುವಂತೆ ಹಿರಿಯರು ಬುದ್ದಿವಾದ ಹೇಳಿದರು. `ತಾನು ದುಡಿದ ಹಣ ತನಗೆ ಮರಳಿಸಿ’ ಎಂದು ಶಿರಸಿ ಶಹರ ಪೊಲೀಸ್ ಠಾಣೆಗೆ ಬಂದು ರವೀಂದ್ರ ಹೆಗಡೆ ಅವರು ಅಳಲು ತೋಡಿಕೊಂಡರು. ಪೊಲೀಸರು ಪ್ರಕರಣ ದಾಖಲಿಸಿದ್ದು, ವಂಚಕರ ಹುಡುಕಾಟ ಶುರು ಮಾಡಿದ್ದಾರೆ.
Discussion about this post