ನಾಗರ ಪಂಚಮಿ ದಿನ ನಾಗಬೀದಿಯ ನಾಗೇಶ್ವರ ದೇವಾಲಯದ ಎದುರು ನಾಗರ ಹಾವು ನೋಡಿದ ಜನ ಭಕ್ತಿಯಿಂದ ನಮಿಸುತ್ತಿದ್ದರು. ಆದರೆ, ಆ ಹಾವಿಗೆ ಹಲ್ಲು ಇರಲಿಲ್ಲ. ಬದುಕುವ ತ್ರಾಣವೂ ಇರಲಿಲ್ಲ!
ಗೋಕರ್ಣದಲ್ಲಿ ಹಲ್ಲಿಲ್ಲದ ಹಾವು ಹಿಡಿದು ಹಣ ಮಾಡುತ್ತಿದ್ದ ಸಾಗರದ ಇಬ್ಬರನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆಪಡೆದಿದ್ದಾರೆ. ನಂತರ ಹಾವುಗಳ ಮಹತ್ವದ ಬಗ್ಗೆ ಅವರಿಗೆ ಬುದ್ದಿ ಹೇಳಿ ಕಳುಹಿಸಿದ್ದು, ಉರಗ ತಜ್ಞ ಅಶೋಕ ನಾಯ್ಕ ಅವರು ಹಾವುಗಳನ್ನು ಕಾಡಿಗೆ ಬಿಟ್ಟಿದ್ದಾರೆ.
ನಾಗಬೀದಿಯಲ್ಲಿರುವ ನಾಗೇಶ್ವರ ಮಂದಿರದ ಎದುರು ಸಾಗರದ ಹಾವಾಡಿಗರು ಹಾವು ಹಿಡಿದು ಆಡಿಸುತ್ತಿದ್ದರು. ಹಾವು ನೋಡಿದ ಜನ ಭಕ್ತಿಯಿಂದ ಹಣ ಚೆಲ್ಲುತ್ತಿದ್ದರು. ಆ ಇಬ್ಬರು ನೈಜ ನಾಗರ ಹಿಡಿದು ಅದರ ಹಲ್ಲು ಕಿತ್ತಿದ್ದರು. ಹಾವು ಬೇಟೆ ಆಡಲು ಸಹ ಆಗದ ಸ್ಥಿತಿಯನ್ನು ತಂದಿಟ್ಟಿದ್ದರು. ತಮ್ಮನ್ನು ತಾವು ಉರಗ ತಜ್ಞರು ಎಂದು ಹೇಳಿಕೊಂಡು ಜನರನ್ನು ಯಾಮಾರಿಸುತ್ತಿದ್ದರು.
ಈ ವಿಷಯದ ಬಗ್ಗೆ ಅಲ್ಲಿನ ನಿವಾಸಿಯೊಬ್ಬರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಅರಣ್ಯ ಇಲಾಖೆಯವರು ಅಶೋಕ ನಾಯ್ಕ ಅವರ ನೆರವುಪಡೆದರು. ಅಶೋಕ ನಾಯ್ಕ ಅವರು ಆಗಮಿಸಿ ಹಾವಿನ ಹಲ್ಲು ಕಿತ್ತಿರುವವರನ್ನು ತರಾಠೆಗೆ ತೆಗೆದುಕೊಂಡರು. ಹಾವಿಗೆ ಚಿತ್ರಹಿಂಸೆ ನೀಡಿದವರ ವಿರುದ್ಧ ಕಿಡಿಕಾರಿದರು.
Discussion about this post