`ರಾಜ್ಯದಲ್ಲಿನ ವೈದ್ಯಕೀಯ ಆಂಬುಲೆನ್ಸ್ಗಳ ಸೇವೆಯನ್ನು ಇನ್ನು ಮುಂದೆ ಕೆಪಿಎಂಇ ಕಾನೂನಿನ ಅಡಿಯಲ್ಲಿ ತರಲು ನಿರ್ಧರಿಸಿದ್ದು, ಈ ಕುರಿತಂತೆ ಬರುವ ವಿಧಾನಸಭೆಯ ಅಧಿವೇಶನದಲ್ಲಿ ಕಾಯಿದೆ ಜಾರಿಗೆ ತರಲಾಗುತ್ತದೆ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಸುದ್ದಿಗಾರರ ಬಳಿ ಹೇಳಿದ್ದಾರೆ.
`ಆಂಬುಲೆನ್ಸ್ ಒದಗಿಸುತ್ತಿರುವ ಸೇವೆಗಳು ಮತ್ತು ಗುಣಮಟ್ಟದ ಬಗ್ಗೆ ಹಲವು ದೂರುಗಳು ಬರುತ್ತಿದೆ. ಆಂಬುಲೆನ್ಸ್ಗಳು ಯಾವ ರೀತಿ ಇರಬೇಕು. ಅದರಲ್ಲಿ ಯಾವ ಅಗತ್ಯ ವ್ಯವಸ್ಥೆಗಳು ಇರಬೇಕು ಎಂಬ ಬಗ್ಗೆ ಹಾಗೂ ಅವುಗಳಿಗೆ ನಿಗಧಿತ ದರ ನಿಗಧಿಪಡಿಸುವ ಬಗ್ಗೆ ಕಾನೂನು ರಚಿಸಲಾಗುತ್ತಿದೆ’ ಎಂದರು. `ಇನ್ನು ಮುಂದೆ ಆಂಬುಲೆನ್ಸ್ ಸೇವೆ ಒದಗಿಸುವವರು ಮತ್ತು ಮೊಬೈಲ್ ಹೆಲ್ತ್ ಯೂನಿಟ್ ಹಾಗೂ ಖಾಸಗಿ ಆಸ್ಪತ್ರೆಗಳ ರೀತಿಯಲ್ಲಿ ಕೆಪಿಎಂಇ ಅಡಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕು’ ಎಂದು ಸೂಚಿಸಿದರು. `ಕೆಪಿಎಂಇ ಅಡಿಯಲ್ಲಿ ನೋಂದಣಿಯಾಗುವ ಆಂಬುಲೆನ್ಸ್ ಗಳಿಗೆ ಅವುಗಳ ಒದಗಿಸುವ ಸೇವೆಯ ಆಧಾರದಲ್ಲಿ ದರ ನಿಗಧಿಪಡಿಸಲಾಗುತ್ತದೆ. ಆಂಬುಲೆನ್ಸ್ ಸೇವೆಯ ಅಗತ್ಯವಿರುವವರು ಆಪ್ ಮೂಲಕ ಬುಕ್ಕಿಂಗ್ ಮಾಡುವ ಸೌಲಭ್ಯ ಒದಗಿಸಲಾಗುತ್ತದೆ. ಈ ಮೂಲಕ ಆಂಬುಲೆನ್ಸ್ ಸೇವೆಯಲ್ಲಿ ಪಾರದರ್ಶಕತೆ ತರಲಾಗುತ್ತದೆ’ ಎಂದರು. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಆರೋಗ್ಯ ಇಲಾಖೆಯಲ್ಲಿ 5500 ಮಂದಿಯನ್ನು ಯಾವುದೇ ಶಿಫಾರಸ್ಸು ಹಸ್ತಕ್ಷೇಪವಿಲ್ಲದೇ ಪಾರದರ್ಶಕವಾಗಿ ಕೌನ್ಸಲಿಂಗ್ ಮೂಲಕ ವರ್ಗಾವಣೆ ಮಾಡಲಾಗಿದೆ. ತಜ್ಞ ವೈದ್ಯರ ವೇತನ ಹೆಚ್ಚಳ ಮಾಡುವುದು ಮಾತ್ರವಲ್ಲದೆ ನೇಮಕಾತಿ ಕೂಡಾ ಮಾಡಲಾಗುತ್ತಿದೆ’ ಎಂದರು.
`108 ಸೇವೆಯನ್ನು ಸಂಪೂರ್ಣ ರಾಜ್ಯ ಸರ್ಕಾರದ ವಶಕ್ಕೆ ತೆಗೆದುಕೊಳ್ಳಲಿದ್ದು, ಈಗಾಗಲೇ ಚಾಮರಾಜನಗರ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಈ ಕಾರ್ಯ ಆರಂಭಿಸಲಿದೆ. ಇದನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಣೆಯಾಗಲಿದ್ದು, ಮುಂದಿನ ತಿಂಗಳು ಎಲ್ಲಾ ಜಿಲ್ಲೆಗಳಲ್ಲಿ ಕಂಟ್ರೋಲ್ ರೂಂ ತೆರೆದು ನಮ್ಮ ಅಧಿಕಾರಿಗಳೇ 108 ನ್ನು ನಿರ್ವಹಣೆ ಮಾಡಲಿದ್ದಾರೆ’ ಎಂದರು. `ಉತ್ತರ ಕನ್ನಡ ಜಿಲ್ಲೆಯಲ್ಲಿ ಎಂಡೋ ಸಲ್ಫಾನ್ ಪೀಡಿತರಿಗೆ ಹೊನ್ನಾವರದಲ್ಲಿ ಚಿಕಿತ್ಸೆ, ಆರೈಕೆ ನೀಡಲು 100 ಹಾಸಿಗೆಯ ಪ್ರತ್ಯೇಕ ಕೇಂದ್ರ ತೆರೆಯುವ ಬಗ್ಗೆ ಮುಖ್ಯಮಂತ್ರಿಗಳ ಪ್ರಸ್ತಾವನೆ ಸಲ್ಲಿಸಲಾಗುವುದು. 3ನೇ ತೆಲೆಮಾರಿಗೆ ಹರಡುತ್ತಿರುವ ಕುರಿತ ಅಧ್ಯಯನ ಮಾಡುವ ಬಗ್ಗೆ ಚಿಂತನೆ ಮಾಡಲಾಗುವುದು. ಮಂಗನ ಖಾಯಿಲೆಗೆ ಲಸಿಕೆ ಬಗ್ಗೆ ಸಂಶೋಧನೆ ನಡೆಯುತ್ತಿದೆ. ಒಂದು ವರ್ಷದಲ್ಲಿ ಹೊಸ ಲಸಿಕೆ ಬರುವ ಸಾಧ್ಯತೆಯಿದೆ’ ಎಂದರು.
ಶಿರಸಿ ಆಸ್ಪತ್ರೆಯೇ ಜಿಲ್ಲಾ ಆಸ್ಪತ್ರೆ!
`ಕಾರವಾರದ ಜಿಲ್ಲಾ ಆಸ್ಪತ್ರೆಯನ್ನು ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ವಿಲೀನ ಮಾಡಿರುವುದರಿಂದ, ಶಿರಸಿಯಲ್ಲಿನ ಆಸ್ಪತ್ರೆಯನ್ನು ಜಿಲ್ಲಾ ಆಸ್ಪತ್ರೆಯಾಗಿ ಅಭಿವೃಧ್ದಿ ಮಾಡಲಾಗುವುದು’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಶಿರಸಿಯಲ್ಲಿನ ಆಸ್ಪತ್ರೆಯನ್ನು ಜಿಲ್ಲಾ ಆಸ್ಪತ್ರೆಯಾಗಿ ಅಭಿವೃಧ್ದಿ ಮಾಡುವ ಕುರಿತಂತೆ ಆಸ್ಪತ್ರೆಗೆ ಅಗತ್ಯವಿರುವ ಸಿಟಿ ಸ್ಕಾನ್, ಎಂ.ಅರ್.ಐ ಯಂತ್ರೋಪಕರಣಗಳು ಸಿಬ್ಬಂದಿ ಹಾಗೂ ಕಿಮೋಥೇರಪಿ ಡೇ ಕೇರ್ ಸೆಂಟರ್ ಸ್ಥಾಪನೆಯ ಕುರಿತಂತೆ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು. `ತಾಯಿ ಮತ್ತು ಮಗುವಿನ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು, ನಿರ್ಜಿವ ಜನನ ದರವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು’ ಎಂದು ಸೂಚಿಸಿದರು.
`ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ 2 ಮಂದಿ ಪ್ರಸೂತಿ ವೈದ್ಯರು, 2 ಮಂದಿ ಅರವಳಿಕೆ ತಜ್ಞರು ಮತ್ತು 2 ಮಂದಿ ಮಕ್ಕಳ ತಜ್ಞರ ಸೇವೆಯನ್ನು ದೊರೆಯುವಂತೆ ಮಾಡುವ ಮೂಲಕ 24*7 ಕಾರ್ಯನಿರ್ವಹಿಸಲು ಕ್ರಮ ಕೈಗೊಳ್ಳಿ. ಜಿಲ್ಲೆಯ ವಿವಿಧ ಆರೋಗ್ಯ ಕೇಂದ್ರಗಳಲ್ಲಿ ಕಡಿಮೆ ಹೆರಿಗೆ ಪ್ರಮಾಣವಿದ್ದಲ್ಲಿ ಅಲ್ಲಿ ಕಾರ್ಯ ನಿರ್ವಹಿಸುವ ತಜ್ಞ ವೈದ್ಯರನ್ನು ತಾಲೂಕು ಆಸ್ಪತ್ರೆಗೆ ನಿಯೋಜಿಸುವ ಮೂಲಕ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುವುದರ ಜೊತೆಗೆ ತುರ್ತು ಸಂದರ್ಭದಲ್ಲಿ ವೈದ್ಯರ ಲಭ್ಯತೆ ಸಿಗುವದರಿಂದ ಮುಂದೆಯಾಗಬಹುದಾದ ಅನಾಹುತವನ್ನು ತಡೆಗಟ್ಟಬಹುದಾಗಿದೆ’ ಎಂದರು. `ಜಿಲ್ಲೆಯಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ 3 ಸಮುದಾಯ ಕೇಂದ್ರಗಳ ಜೊತೆ ಹೊಸದಾಗಿ ನಿರ್ಮಾಣವಾಗುತ್ತಿರುವ 5 ಸಮುದಾಯಗಳಿಗೆ ಅಗತ್ಯ ಸಿಬ್ಬಂದಿಗಳ ನಿಯೋಜನೆ ಹಾಗೂ ಯಂತ್ರೋಪಕರಣ ಪೂರೈಕೆಗೆ ಆರ್ಥಿಕ ಇಲಾಖೆ ಸಮ್ಮತಿ ನೀಡಲಾಗಿದೆ ‘ ಎಂದರು.
ಗೃಹ ಆರೋಗ್ಯದ ಯೋಜನೆಯನ್ನು ಜಿಲ್ಲೆಯಲ್ಲಿ ತಕ್ಷಣ ಅನುಷ್ಠಾನ ಮಾಡುವಂತೆ ಸೂಚಿಸಿದ ಸಚಿವರು `ವೈದ್ಯರು ಮತ್ತು ಸಿಬ್ಬಂದಿಗಳು ಜಿಲ್ಲೆಯ ಪ್ರತೀ ಮನೆಗಳಿಗೆ ತೆರಳಿ ಬಿಪಿ, ಶುಗರ್, ಮುಂತಾದ ತಪಾಸಣೆ ಮಾಡಬೇಕು. ಈ ಕಾಯಿಲೆ ಕಂಡು ಬಂದಲ್ಲಿ ನಿರಂತರವಾಗಿ ಉಚಿತವಾಗಿ ಔಷಧ ಸರಬರಾಜು ಮಾಡಬೇಕು’ ಎಂದರು. `ರಾಜ್ಯದಲ್ಲಿ ಶಾಶ್ವತ ದೃಷ್ಟಿ ಗ್ಯಾರಂಟಿಯಡಿ 398 ಆಶಾ ಕಿರಣ ಕೇಂದ್ರಗಳನ್ನು ತೆರೆಯಲಾಗಿದ್ದು, ಜಿಲ್ಲೆಯಲ್ಲಿ 14 ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಈ ಕೇಂದ್ರಗಳಲ್ಲಿ ಸಾರ್ವಜನಿಕರು ಉಚಿತವಾಗಿ ತಮ್ಮ ದೃಷ್ಟಿ ದೋಷದ ತಪಾಸಣೆಯ ಜೊತೆ ಕನ್ನಡಕ ಮತ್ತು ಶಸ್ತç ಚಿಕಿತ್ಸೆಯನ್ನು ಮಾಡಲಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ಸಾರ್ವಜನಿಕರಿಗೆ ಮಾಹಿತಿ ನೀಡಬೇಕು’ ಎಂದರು.
Discussion about this post