ಉತ್ತರ ಕನ್ನಡ ಜಿಲ್ಲೆಗೆ ಬುಧವಾರ ಭೇಟಿ ನೀಡಿದ ಆರೋಗ್ಯ ಸಚಿವ ದಿನೇಶ ಗುಂಡುರಾವ್ ಅವರು ಪೂರ್ವನಿಗಧಿತ ಕಾರ್ಯಕ್ರಮದ ಪ್ರಕಾರ ಕುಮಟಾ ಆಸ್ಪತ್ರೆಗೆ ಭೇಟಿ ನೀಡಬೇಕಿತ್ತು. ಆದರೆ, ಅವರು ಅಲ್ಲಿಗೆ ತೆರಳಲು ಮನಸ್ಸು ಮಾಡಲಿಲ್ಲ. ಹೀಗಾಗಿ ಕುಮಟಾದ ಕಾಂಗ್ರೆಸ್ ಕಾರ್ಯಕರ್ತರು ಹೆದ್ದಾರಿಯಲ್ಲಿಯೇ ಅವರನ್ನು ತಡೆದು ಹಾರ-ಶಾಲು ಹೊದೆಸಿ ಮುಂದೆ ಕಳುಹಿಸಿದರು.
ಕುಮಟಾದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಿಸಬೇಕು ಎಂಬುದು ಮೊದಲಿನಿಂದಲೂ ಇರುವ ಆಗ್ರಹ. ಇದರೊಂದಿಗೆ ಕುಮಟಾದಲ್ಲಿ ಸೇವೆ ಸಲ್ಲಿಸುತ್ತಿದ್ದ ವೈದ್ಯರ ವರ್ಗಾವಣೆ ಸಹ ಜನರ ಆಕ್ರೋಶಕ್ಕೆ ಕಾರಣ. `ಈ ಎರಡು ವಿಷಯದಲ್ಲಿ ಕುಮಟಾ ಜನರ ಸಿಟ್ಟು ಎದುರುಹಾಕಿಕೊಳ್ಳುವುದು ಬೇಡ ಎಂಬ ಕಾರಣಕ್ಕೆ ಸಚಿವರು ದಾರಿ ಬದಲಿಸಿದರು’ ಎಂಬ ಮಾತು ಪಟ್ಟಣದಲ್ಲಿ ಕೇಳಿಸಿತು. ಮೊದಲ ಎರಡು ಬಾರಿ ಬಿಡುಗಡೆಯಾದ ಸಚಿವರ ಪ್ರವಾಸ ಪಟ್ಟಿಯಲ್ಲಿ ಕುಮಟಾ ಆಸ್ಪತ್ರೆಗೆ ಭೇಟಿ ನೀಡುವ ವಿಷಯ ನಮೂದಾಗಿತ್ತು. ಮೂರನೇ ಬಾರಿ ಬಿಡುಗಡೆ ಆದ ಪಟ್ಟಿಯಲ್ಲಿ ಕುಮಟಾ ಆಸ್ಪತ್ರೆ ವಿಷಯವೇ ಇರಲಿಲ್ಲ.
ಸಚಿವರು ಬೆಳಿಗ್ಗೆ 11.35ರ ಸುಮಾರಿಗೆ ಪ್ರವಾಸದ ಪಟ್ಟಿಯಂತೆ ಕಾರವಾರದಿಂದ ಹೊನ್ನಾವರ ಸರ್ಕಾರಿ ಆಸ್ಪತ್ರೆ ಭೇಟಿಗೆ ಕುಮಟಾ ಮಾರ್ಗವಾಗಿ ಆಗಮಿಸಿದ್ದರು. ಗಿಬ್ ಹೈಸ್ಕೂಲಿನ ಪಕ್ಕದಲ್ಲಿ ಬ್ಲಾಕ್ ಕಾಂಗ್ರೆಸ್ ಕಚೇರಿ ಇದ್ದು, ಈ ಕಚೇರಿಯ ಎದುರು 5 ನಿಮಿಷಗಳ ಕಾಲ ಸಚಿವರ ಕಾರು ನಿಂತಿತು. ಕಾರ್ಯಕರ್ತರು ಅವರನ್ನು ಅಲ್ಲಿಯೇ ನಿಲ್ಲಿಸಿ ಶಾಲು ಹೊದೆಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭುವನ್ ಭಾಗ್ವತ, ಹಿರಿಯ ಕಾಂಗ್ರೆಸ್ ಮುಖಂಡರಾದ ಧೀರೂ ಶಾನಭಾಗ, ಹೊನ್ನಪ್ಪ ನಾಯಕ ಇತರರು ಶಾಲು ಹೊದೆಸಿ ಫೋಟೋ ತೆಗೆಸಿಕೊಂಡರು. `ಹೆದ್ದಾರಿಯ ಪಕ್ಕದಲ್ಲೆ ಸರ್ಕಾರಿ ಆಸ್ಪತ್ರೆ ಇದೆ. ಒಮ್ಮೆ ಭೇಟಿ ನೀಡಿ ಹೋಗಿ. ಹಾಗೇ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಮಲ್ಟಿಸ್ಪೇಶಾಲಿಟಿ ಆಸ್ಪತ್ರೆ ನಿರ್ಮಿಸಿಕೊಡುತ್ತೇವೆ ಎಂದು ಚುನಾವಣೆ ವೇಳೆ ಭರವಸೆ ನೀಡಿದ್ದೇವು’ ಎಂದು ಅಲ್ಲಿದ್ದ ಕೆಳ ಹಂತದ ಕಾರ್ಯಕರ್ತರು ನೆನಪಿಸಿದರು. ಅದಾಗಿಯೂ, ಸಚಿವರು ಆಸ್ಪತ್ರೆ ಕಡೆ ಮುಖ ಹಾಕಲಿಲ್ಲ. ಸುಸಜ್ಜಿತ ಆಸ್ಪತ್ರೆ ಬಗ್ಗೆಯೂ ಮಾತನಾಡಲಿಲ್ಲ. `ಮತ್ತಮ್ಮೊ ಬರುತ್ತೇನೆ’ ಎನ್ನುತ್ತಲೇ ಕಾರು ಹತ್ತಿ ಹೊನ್ನಾವರದ ಕಡೆ ಹೋದರು.
Discussion about this post