ಮಂಗಳೂರಿನಿoದ ಸವದತ್ತಿಗೆ ತೆರಳುತ್ತಿದ್ದ ಬಸ್ಸನ್ನು ಶಿರಸಿಯಲ್ಲಿ ಅಡ್ಡಗಡ್ಡಿದ ಮುಂಡಗೋಡಿನ ಮೂವರು ಬಸ್ಸಿನ ಚಾಲಕ-ನಿರ್ವಾಹಕರ ಮೇಲೆ ಕೈ ಮಾಡಿದ್ದಾರೆ. ನೋವುಂಡ ಸರ್ಕಾರಿ ನೌಕರರು ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಜುಲೈ 29ರಂದು ಬೆಳಗ್ಗೆ ಮಂಗಳೂರಿನಿoದ ಸವದತ್ತಿಗೆ ಹೋಗುವ ಬಸ್ಸು ಶಿರಸಿ ಮಾರ್ಗವಾಗಿ ಸಂಚರಿಸುತ್ತಿತ್ತು. ಈ ಬಸ್ಸನ್ನು ಕರಿಯಪ್ಪ ಕೈನಾಕಟ್ಟಿ ಓಡಿಸುತ್ತಿದ್ದರು. ಶಿವಾನಂದ ಬೆಳ್ಳಿಕೊಪ್ಪಿ ನಿರ್ವಾಹಕರಾಗಿ ಟಿಕೆಟ್ ತೆಗೆಯುತ್ತಿದ್ದರು.
ಎಕ್ಕಂಬಿ ಚರ್ಚಿನ ಹತ್ತಿರ ಎರಡು ಬೈಕಿನಲ್ಲಿ ಬಂದ ಮೂರು ಜನ ಬಸ್ಸನ್ನು ಅಡ್ಡಗಟ್ಟಿದರು. ಅದಕ್ಕೂ ಮುನ್ನ ಆ ಮೂವರು ಬಸ್ಸಿಗೆ ದಾರಿ ಬಿಡದೇ ಅಡ್ಡಾದಿಡ್ಡಿ ಬೈಕ್ ಓಡಿಸುತ್ತಿದ್ದರು. ಬಸ್ಸನ್ನು ಅಡ್ಡಗಟ್ಟಿದ ಬಗ್ಗೆ ಶಿವಾನಂದ ಬೆಳ್ಳಿಕೊಪ್ಪಿ ಆ ಮೂವರನ್ನು ಪ್ರಶ್ನಿಸಿದರು. ಇದರಿಂದ ಸಿಟ್ಟಾದ ಅವರು ಬಸ್ ನಿರ್ವಾಹಕನನ್ನು ಕೆಳಗಿಳಿಸಿ ಹಿಗ್ಗಾಮುಗ್ಗ ಥಳಿಸಿದರು.
ಈ ಹೊಡೆದಾಟ ತಪ್ಪಿಸಲು ಬಂದ ಬಸ್ ಚಾಲಕ ಕರಿಯಪ್ಪ ಕೈನಾಕಟ್ಟಿ ಸಹ ಪೆಟ್ಟು ತಿಂದರು. ಕೊನೆಗೆ ತಮ್ಮ ಮೇಲೆ ಹಲ್ಲೆ ನಡೆಸಿದ ಮುಂಡಗೋಡು ಬೆಡಸಗಾಂವ್’ನ ಸಚಿನ ನಾಯ್ಕ, ಮಹೇಶ ನಾಯ್ಕ ಹಾಗೂ ಹರೀಶ ನಾಯ್ಕ ವಿರುದ್ಧ ಅವರು ಪೊಲೀಸ್ ದೂರು ನೀಡಿದರು. ಬಸ್ ನಿರ್ವಾಹಕ ನೀಡಿದ ದೂರಿನ ಅನ್ವಯ ಶಿರಸಿ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಶುರು ಮಾಡಿದ್ದಾರೆ.
Discussion about this post