ಕೈಗಾ ಅಣು ವಿದ್ಯುತ್ ಘಟಕದ ಗುತ್ತಿಗೆ ಕಾರ್ಮಿಕರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಕೈಗಾ ಅಣು ವಿದ್ಯುತ್ ಸ್ಥಾವರದ ಗುತ್ತಿಗೆ ಕಾರ್ಮಿಕರ ಸಂಘದ ಸದಸ್ಯರು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ಮನವರಿಕೆ ಮಾಡಿದ್ದಾರೆ.
ಕೈಗಾದಲ್ಲಿ ಕೆಲಸ ಮಾಡುವ ಗುತ್ತಿಗೆ ನೌಕರರಿಗೆ ಸಮಯಕ್ಕೆ ಸರಿಯಾಗಿ ಬಸ್ ಸಿಗದಿರುವುದು, ಗುತ್ತಿಗೆ ನೇಮಕಾತಿಯಲ್ಲಿ ನಿರಾಶ್ರೀತರಿಗೆ ಮೀಸಲಾತಿ ಕಲ್ಪಿಸುವುದು, ಕಾರವಾರದಲ್ಲಿ ಇಎಸ್‌ಐ ಆಸ್ಪತ್ರೆ ಸ್ಥಾಪನೆ, ಪೊಲೀಸ್ ಪ್ರಮಾಣ ಪತ್ರದ ಅವಧಿಯನ್ನು 3 ವರ್ಷಕ್ಕೆ ವಿಸ್ತರಿಸುವುದನ್ನು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸಂಘದ ಅಧ್ಯಕ್ಷ ವಿಕೇಶ ಬಾಂದೇಕರ್ ಮನವಿ ಸಲ್ಲಿಸಿದ್ದಾರೆ.
`ಗುತ್ತಿಗೆ ನೌಕರರಿಗೆ ಕೆಲಸಕ್ಕೆ ತೆರಳಲು ಸಮಯಕ್ಕೆ ಸರಿಯಾಗಿ ಬಸ್ ಸಿಗುತ್ತಿಲ್ಲ. ಇದರಿಂದ ನೌಕರರು ಕೆಲಸ ಮಾಡಿದರೂ ಹಾಜರಾತಿ ಸಮಸ್ಯೆ ಎದುರಾಗುತ್ತಿದೆ. ರಸ್ತೆ ಮದ್ಯೆ ಕೆಟ್ಟು ನಿಲ್ಲುವ ಬಸ್ ಪರಿಸ್ಥಿತಿ ಸುಧಾರಿಸಬೇಕಿದೆ’ ಎಂದವರು ವಿವರಿಸಿದರು. `ಕೈಗಾ ಅಣು ಘಟಕದಲ್ಲಿ ಹೆಚ್ಚುವರಿಯಾಗಿ ಇನ್ನೆರಡು ಘಟಕ ಸ್ಥಾಪನೆ ನಡೆಯುತ್ತಿದೆ. ಅಲ್ಲಿ ಸ್ಥಳೀಯ ನಿರಾಶ್ರಿತರಿಗೆ ಉದ್ಯೋಗ ಒದಗಿಸಬೇಕು. 300ಕ್ಕೂ ಅಧಿಕ ಹುದ್ದೆಗಳನ್ನು ಇದೀಗ ಕರೆಯಲಾಗಿದ್ದು, ಸ್ಥಳೀಯರಿಗೆ ಶೇ 60ರ ಮೀಸಲಾತಿ ನೀಡಬೇಕು’ ಎಂದು ಆಗ್ರಹಿಸಿದರು.
`ಕಾರವಾರದಲ್ಲಿ ಇಎಸ್‌ಐ ಆಸ್ಪತ್ರೆ ಸ್ಥಾಪನೆ ಮಾಡುವುದರಿಂದ ಅನೇಕರಿಗೆ ಅನುಕೂಲವಾಗಲಿದೆ. ಕೈಗಾದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಸಹ ಇದು ಸಹಾಯವಾಗಲಿದೆ. ಸದ್ಯ ಇಎಸ್‌ಐ ಆಸ್ಪತ್ರೆ ದಾಂಡೇಲಿಯಲ್ಲಿರುವುದರಿAದ ರೋಗಿಗಳಿಗೆ ಸಮಸ್ಯೆ ಆಗಿದ್ದು, ಅದನ್ನು ಬಗೆಹರಿಸಬೇಕು’ ಎಂದು ಮನವಿ ಮಾಡಿದರು. ಈ ಎಲ್ಲಾ ಮನವಿ ಆಲಿಸಿದ ಸಚಿವರು ಬೆಂಗಳೂರಿನಲ್ಲಿ ಕಾರ್ಮಿಕ ಸಂಘಟನೆಗಳ ಜೊತೆ ಸಭೆ ನಡೆಸುವ ಭರವಸೆ ನೀಡಿದರು. ಸಂಘಟನೆ ಪ್ರಧಾನ ಕಾರ್ಯದರ್ಶಿ ಕಿರಣ್ ಕೊಠಾರಕರ, ಉಪಾಧ್ಯಕ್ಷರಾದ ರವಿ ಕಡವಾಡಕರ, ಗೋಪಾಲಕೃಷ್ಣ ಬಾಂದೇಕರ, ಸದಸ್ಯರಾದ ಅಕ್ಷಯ ಬಾಂದೇಕರ, ಅಮೃತ್ ಬಾಂದೇಕರ, ರಾಜೇಶ್ ನಾಯ್ಕ ಇದ್ದರು.
ಸಚಿವರಿಗೆ ಮನವಿ ನೀಡಿದ ವಿಡಿಯೋ ಇಲ್ಲಿ ನೋಡಿ..
Discussion about this post