ಮದುವೆ ಆಗದವರು.. ಮಾತು ಸರಿಯಾಗಿ ಬಾರದವರು ಸೇರಿ ಅನೇಕರು ಗೋಕರ್ಣದ ಗಣಪತಿಗೆ ಕೊಟ್ಟೆ ಕಡುಬಿನ ಹರಕೆ ಹೋರುತ್ತಾರೆ. ಕೊಟ್ಟೆ ಕಡಬಿನ ಕಣಜ ಜೊತೆ ಸಕ್ಕರೆ ಕಣಜ, ಮೋದಕ ಕಣಜದ ಹರಕೆಯನ್ನು ಹೋರುತ್ತಾರೆ. ಆದರೆ, ಈ ಹರಕೆಯೇ ಇದೀಗ ಗಣಪನ ವಿಗ್ರಹಕ್ಕೆ ವಿಘ್ನವಾಗುವ ಲಕ್ಷಣಗಳಿವೆ!
ಪ್ರಪಂಚದಲ್ಲಿಯೇ ಎಲ್ಲಿಯೂ ಇಲ್ಲದ ಅಪರೂಪದ ಗಣಪನ ವಿಗ್ರಹ ಗೋಕರ್ಣದಲ್ಲಿದೆ. ಆ ದೇವರಿಂದಲೇ ಸ್ಥಾಪಿತವಾದ ಗಣಪ ಎಂಬ ಪ್ರತೀಥಿ ಈ ದೇವರದ್ದಾಗಿದೆ. ಆದರೆ, ಹರಕೆಯ ಬಾರಕ್ಕೆ ಗಣಪನ ವಿಗ್ರಹ ನಲುಗಿದ್ದು, ಮುಂದಿನ ತಲೆಮಾರಿಗೂ ಐತಿಹಾಸಿಕ ಗಣಪನನ್ನು ಉಳಿಸಿಕೊಳ್ಳುವ ಅನಿವಾರ್ಯ ಸೃಷ್ಠಿಯಾಗಿದೆ.
ಮಾರುಕಟ್ಟೆಯಲ್ಲಿ ಸಿಗುವ ಕೃತಕ ತುಪ್ಪ-ಜೇನುತುಪ್ಪವನ್ನು ಗಣಪನಿಗೆ ಅರ್ಪಿಸಲಾಗುತ್ತದೆ. ಅದರಿಂದಲೂ ಗಣಪನ ವಿಗ್ರಹಕ್ಕೆ ಧಕ್ಕೆ ಆಗುವ ಸಾಧ್ಯತೆಗಳಿವೆ. ವರ್ಷದಿಂದ ವರ್ಷಕ್ಕೆ ಗೋಕರ್ಣ ಗಣಪನ ವಿಗ್ರಹದ ಸವಕಳಿ ಹೆಚ್ಚಾಗಿದ್ದು, ಎಂಟು ವರ್ಷದ ಹಿಂದೆಯೇ ಧಾರ್ಮಿಕ ದತ್ತಿ ಇಲಾಖೆ ಗಣಪನ ಸ್ಪರ್ಶ ನಿಷೇಧಿಸಿತ್ತು. ಆದರೆ, ಈ ನಿಯಮ ಕಟ್ಟುನಿಟ್ಟಾಗಿ ಪಾಲನೆ ಆಗಿರಲಿಲ್ಲ.
ಸದ್ಯ ಗಣಪನಿಗೆ ಗಣಜ ಹರಕೆ ಹೋರುವವವರ ಸಂಖ್ಯೆ ಹೆಚ್ಚಾಗುತ್ತಿದೆ. ಬಿಸಿ ಬಿಸಿ ಕಡುಬು ಹಾಗೂ ಎಣ್ಣೆಯಲ್ಲಿ ಕರಿದ ಪದಾರ್ಥಗಳು ಮೃದು ಕಲ್ಲಿನ ಗಣಪನನ್ನು ಸುತ್ತುವರೆಯುವುದರಿಂದ ಆ ವಿಗ್ರಹ ಇನ್ನಷ್ಟು ಸವಕಳಿ ಅನುಭವಿಸುವ ಬಗ್ಗೆ ಪುರಾತತ್ವ ತಜ್ಞರು ಆತಂಕವ್ಯಕ್ತಪಡಿಸಿದ್ದಾರೆ.
ಗಣಪತಿಗೆ ಹರಕೆ ಹೊತ್ತುಕೊಂಡವರು ಹರಕೆ ರೂಪವಾಗಿ ಬಿಸಿಬಿಸಿಯಾದ ಕೊಟ್ಟೆ ಕಡಬನ್ನ ಗಣಪತಿಯ ಸುತ್ತಲು ಇಡುತ್ತಾರೆ. ಈ ಹೆಚ್ಚಿನ ಉಷ್ಣಾಂಶದ ಕಡಬು ಗಣಪತಿಯ ಈ ಪುರಾತನ ಶಿಲಾ ವಿಗ್ರಹಕ್ಕೆ ಮಾರಕವಾಗಬಲ್ಲದು ಎಂಬುದು ತಜ್ಞರ ಅಭಿಮತ.
`ದೇವರಿಂದಲೇ ಸ್ಥಾಪಿತವಾಗಿದೆಯೆಂದು ನಂಬಲಾದ ಅತ್ಯಂತ ಅಪರೂಪದ ಏಕೈಕ ಈ ಗಣಪತಿಯ ಮೂರ್ತಿಯನ್ನು ರಕ್ಷಿಸುವ, ಉಳಿಸುವ, ಮುಂದಿನ ಪೀಳಿಗೆಗೆ ಕಾದಿಡುವ ದೃಷ್ಟಿಯಿಂದ ಕೆಲ ಬದಲಾವಣೆ ಅಗತ್ಯ. ಈ ಕೊಟ್ಟೆ ಕಡುಬಿನ ಸೇವೆಯನ್ನು ದೇವರ ಎದುರಿಗೆ ಇಟ್ಟು ಗಣಪತಿಗೆ ನೈವೇದ್ಯ ಮಾಡುವ ವಿಚಾರವೂ ಪೂರಕ ಬೆಳವಣಿಗೆ. ಅನ್ಯಥಾ ಭಾವನೆಗೆ ಅವಕಾಶ ನೀಡದೇ, ಮಹಾಗಣಪತಿಯ ಮೂರ್ತಿಯ ರಕ್ಷಣೆಯ ದೃಷ್ಟಿಯಿಂದ ತುರ್ತಾಗಿ ಈ ಬಗ್ಗೆ ಯೋಚಿಸಬೇಕು’ ಎಂಬುದು ಆಯುರ್ವೇದ ವೈದ್ಯ ಡಾ ರವಿಕಿರಣ ಪಟವರ್ಧನ ಅವರ ಅಭಿಮತ.
Discussion about this post