ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳು ಬುಧವಾರ ತಮ್ಮ ಶಿಷ್ಯರಿಗೆ ಸೋಪು ಬಳಸದಂತೆ ಹೇಳಿದ್ದು, ಗುರುವಾರ `ಹಲ್ಲು ಉಚ್ಚಲು ಪೇಸ್ಟು-ಬ್ರೆಶು ಬಳಸದಿರಿ’ ಎಂದು ಕರೆ ನೀಡಿದ್ದಾರೆ.
ಆಂಗ್ಲ ಪದದ ವಿರುದ್ಧ ಸಮರ ಸಾರುತ್ತಿರುವ ರಾಘವೇಶ್ವರ ಶ್ರೀಗಳು ಸೋಪು ಬಳಸದಂತೆ ಹೇಳಿದ್ದರು. `ಕನಿಷ್ಟ ಸೋಪು ಎಂಬ ಪದವನ್ನಾದರೂ ಕೈ ಬಿಡಿ’ ಎಂದು ಮನವಿ ಮಾಡಿದ್ದರು. ಸೋಪಿನ ಬದಲು ಮಣ್ಣು ಹಾಗೂ ಸೀಗೆಗಾಯಿ ಪುಡಿ ಬಳಸಿ ಎಂದು ಕರೆ ನೀಡಿದ್ದರು. ಈ ದಿನ `ಪ್ಲಾಸ್ಟಿಕ್ ಬಳಸಿ ಸಿದ್ಧಪಡಿಸಿದ ಟೂತ್‌ಪೇಸ್ಟು ಹಾಗೂ ಬ್ರೆಶನ್ನು ಬಳಸಬೇಡಿ’ ಎಂದವರು ಹೇಳಿದ್ದಾರೆ.
`ಟೂತ್ ಬ್ರೆಷ್ ಎಂಬ ನಿಷೇಧಿತ ಪ್ಲಾಸ್ಟಿಕ್ ಸಾಧನ ಬಳಕೆಯೊಂದಿಗೆ ನಾವು ದಿನ ಶುರು ಮಾಡುವುದು ಸರಿಯಲ್ಲ. ಇದರ ಬದಲಾಗಿ ಸಾಂಪ್ರದಾಯಿಕವಾಗಿ ಬಳಸುತ್ತಿದ್ದ ಹೊಂಗೆ, ಬೇವಿನಕಡ್ಡಿ, ಮಾವಿನಕಡ್ಡಿ, ಆಲದ ಕಡ್ಡಿಯನ್ನು ಬಳಸುವುದು ಅಗತ್ಯ’ ಎಂದವರು ಕಿವಿಮಾತು ಹೇಳಿದರು. `ಒಂದೇ ಬಾರಿಗೆ ಟೂತ್‌ಪೇಸ್ಟ್ ಬಿಡಲು ಸಾಧ್ಯವಾಗದೇ ಇದ್ದರೆ ಮರಳಿನ ಪುಡಿ, ಎಲುಬಿನ ಪುಡಿ, ಹಾನಿಕಾರಕ ರಾಸಾಯನಿಕಗಳಿಂದ ತಯಾರಿಸಿದ ದಂತಮoಜನ ಬಳಸದೇ ಮಂಗಲದ್ರವ್ಯಗಳಿoದ ತಯಾರಿಸಿದ ಉತ್ಪನ್ನಗಳ ಬಳಕೆ ಶುರು ಮಾಡಿ’ ಎಂದು ಆಶಿಸಿದರು.
`ಸಂಸ್ಕೃತದ ಪಿಷ್ಟ ಎಂಬ ಪದ ಕನ್ನಡದಲ್ಲಿ ಹಿಟ್ಟು ಎಂದು ಕರೆಯಲ್ಪಡುತ್ತಿದೆ. ಅದೇ ಆಂಗ್ಲದಲ್ಲಿ ಪೇಸ್ಟ್ ಆಗಿದೆ’ ಎಂದು ಅವರು ವಿಶ್ಲೇಷಿಸಿದರು. ಹೊಂಗೆ, ಬೇವಿನಕಡ್ಡಿ, ಮಾವಿನ ಕಡ್ಡಿಯನ್ನು ಅಗಿದು ದಂತದಾವನ ಮಾಡಲಾಗುತ್ತಿತ್ತು. ದಂತ ಚೂರ್ಣ ಬಳಕೆ ಇತ್ತು. ಬಳಿಕ ದಂತಮoಜನ ಆಯಿತು. ಕನ್ನಡದಲ್ಲಿ ಟೂತ್‌ಪೇಸ್ಟಿಗೆ ಹಲ್ಸರಿ ಎಂಬ ಪದ ಇದ್ದು, ಆ ಪದ ಬಳಕೆ ಹೆಚ್ಚಲಿ’ ಎಂದು ಆಶಿಸಿದರು.
`ಹೊಸ ಹೊಸ ಅನ್ವೇಷಣೆಗಳು ಆದಾಗ, ಹೊಸ ವಸ್ತುಗಳು ಬಂದಾಗ ಅದಕ್ಕೆ ತಕ್ಕ ಪದಗಳನ್ನು ಸೃಷ್ಟಿಸುವ ಸಾಮಥ್ರ‍್ಯ ಮತ್ತು ಸಮೃದ್ಧತೆ ನಮ್ಮ ಭಾಷೆಗೆ ಇದೆ’ ಎಂದರು. `ಭಾಷೆಯಿಂದ ಮೊದಲ್ಗೊಂಡು ನಮ್ಮತನ, ನಮ್ಮ ಉಡುಗೆ- ತೊಡುಗೆ, ನಮ್ಮ ಆಹಾರ- ವಿಹಾರ, ನಮ್ಮ ಸಂಸ್ಕೃತಿ- ಪರಂಪರೆಗೆ ಮರಳುವುದು ಅಗತ್ಯ’ ಎಂದವರು ಹೇಳಿದರು. `ಇಂಗ್ಲಿಷ್ ಪದಗಳಿಂದ ಭಾಷೆಯನ್ನು ಕಲುಷಿತಗೊಳಿಸುವ ಬದಲು ಸಂಸ್ಕೃತ ಅಥವಾ ಇತರ ಭಾರತೀಯ ಭಾಷೆಯ ಪದಗಳನ್ನು ಆಧಾರವಾಗಿಟ್ಟುಕೊಂಡು ಅಗತ್ಯಕ್ಕೆ ತಕ್ಕಂತೆ ಹೊಸ ಪದಗಳನ್ನು ಸೃಷ್ಟಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
Discussion about this post