ಉತ್ತರ ಕನ್ನಡ ಜಿಲ್ಲೆ ನಗರ ಸ್ಥಳೀಯ ಸಂಸ್ಥೆಯಲ್ಲಿನ ಅರಣ್ಯಹಕ್ಕು ಕಾಯಿದೆ ಅಡಿಯಲ್ಲಿ ಅರಣ್ಯವಾಸಿಗಳು ಸಲ್ಲಿಸಿರುವ ಅರ್ಜಿ ಕಳೆದ ನಾಲ್ಕು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ.
ಯಾವುದೇ ಕಾನೂನು ತೊಡಕು ಇಲ್ಲದಿದ್ದರೂ ಅರ್ಜಿಯ ಕುರಿತು ಅಗತ್ಯ ಕ್ರಮ ಜರುಗಿಸಲು ಮಾತ್ರ ಅಧಿಕಾರಿಗಳು ಆಸಕ್ತಿವಹಿಸಿಲ್ಲ. ಸ್ಥಳೀಯ ಸಂಸ್ಥೆಗಳ ಕಚೇರಿ ಕಡತದಲ್ಲಿ ಸಾವಿರಾರು ಅರ್ಜಿಗಳು ಹಾಗೇ ಉಳಿದಿವೆ. ಅಧಿಕಾರಿಗಳು ಬದಲಾದರೂ ಆ ಅರ್ಜಿಗಳ ಸ್ಥಿತಿ ಬದಲಾಗಿಲ್ಲ.
ಗ್ರಾಮೀಣ ಭಾಗದ ಉಪ ವಿಭಾಗ ಮತ್ತು ಜಿಲ್ಲಾ ಅರಣ್ಯ ಹಕ್ಕು ಸಮಿತಿಗೆ ಜಿಲ್ಲಾ ಪಂಚಾಯತ್ ಮತ್ತು ತಾಲೂಕ ಪಂಚಾಯತ್ ಸದಸ್ಯರಿಲ್ಲದೇ ಮಂಜೂರಿ ಪ್ರಕ್ರಿಯೆ ಸ್ಥಗಿತಗೊಂಡಿದೆ. ಆದರೆ ನಗರ ಸ್ಥಳೀಯ ಸಂಸ್ಥೆಯ ವಾರ್ಡ ಸಮಿತಿ, ನಗರ ಉಪವಿಭಾಗ, ಮತ್ತು ಜಿಲ್ಲಾ ಮಟ್ಟದ ನಗರ ಸಮಿತಿ ಅಸ್ಥಿತ್ವದಲ್ಲಿದ್ದು ಇದರ ಅರ್ಜಿ ವಿಲೇವಾರಿಗೆ ಯಾವ ಸಮಸ್ಯೆಯೂ ಇಲ್ಲ. ಆದರೆ, ಇಚ್ಚಾಶಕ್ತಿ ಕೊರತೆಯೇ ಇಲ್ಲಿನ ದೊಡ್ಡ ಸಮಸ್ಯೆ.
ಉತ್ತರಕನ್ನಡ ಜಿಲ್ಲೆಯ 213 ವಾರ್ಡ ಸಮಿತಿಗಳ ಮೂಲಕ ಅರಣ್ಯ ಹಕ್ಕು ಮಂಜೂರಿ ಪ್ರಕ್ರಿಯೆಗೆ ಸಮಿತಿ ರಚಿಸಲಾಗಿತ್ತು. ಆದರೆ ಮಂಜೂರಿ ಪ್ರಕ್ರಿಯೆಗೆ ಸಂಬAಧಿಸಿ ವಾರ್ಡ ಸಮಿತಿ ಸಭೆ, ವಾರ್ಡ ಸಭೆ ಅರ್ಜಿ ಪರಿಶೀಲನೆ, ದಾಖಲೆಗಳ ಸಂಗ್ರಹ, ಜಿಪಿಎಸ್ ಸರ್ವೇ ಕಾರ್ಯ ಮುಂತಾದ ಕೆಲಸಗಳು ಈವರೆಗೂ ಪ್ರಗತಿ ಕಂಡಿಲ್ಲ. ಇದರಿಂದ ವಾಸ್ತವ್ಯಕ್ಕಾಗಿ ಆರ್ಥಿಕವಾಗಿ ಹಿಂದುಳಿದ ಅರಣ್ಯವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ.
ಉತ್ತರಕನ್ನಡ ಜಿಲ್ಲೆಯಲ್ಲಿ ವಿವಿಧ ತಾಲೂಕಿನ ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಒಟ್ಟು 8420 ಅರಣ್ಯ ಹಕ್ಕು ಅರ್ಜಿಗಳು ಸ್ವೀಕರಿಸಲಾಗಿದೆ. ಕಾರವಾರ 20, ಹಳಿಯಾಳ 1570, ಅಂಕೋಲಾ 270, ಕುಮಟಾ 414, ಹೊನ್ನಾವರ À519, ಭಟ್ಕಳ 391, ಶಿರಸಿ 1241, ಸಿದ್ದಾಪುರ 1391, ಯಲ್ಲಾಪುರ 1750, ಮುಂಡಗೋಡ 854, ಅರಣ್ಯವಾಸಿಗಳು ಈ ಅರ್ಜಿಯ ಮುಂದಿನ ಹಂತಕ್ಕಾಗಿ ಕಾಯುತ್ತಿದ್ದಾರೆ.
ರಾಜ್ಯ ಅರಣ್ಯ ಭೂಮಿಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಈ ಬಗ್ಗೆ ಮಾಹಿತಿ ನೀಡಿದ್ದು, ಸರ್ಕಾರಿ ಕಚೇರಿಗೆ ಸಲ್ಲಿಸಿದ ಅರ್ಜಿ ಪ್ರಗತಿ ಕಾಣದಿರುವ ಬಗ್ಗೆ ಅಸಮಧಾನವ್ಯಕ್ತಪಡಿಸಿದರು. ದೇಶದಲ್ಲಿ ಅರಣ್ಯಹಕ್ಕು ಕಾಯಿದೆ ಜಾರಿಗೆ ಬಂದು 18 ವರ್ಷಗಳಾದರೂ ಮಂಜೂರಿ ಪ್ರಕ್ರಿಯೆ ಕುಂಟಿತವಾಗಿರುವ ಬಗ್ಗೆ ಅವರು ಕಿಡಿಕಾರಿದರು.
Discussion about this post