ಶಿರಸಿ ನಗರಸಭೆ ಕೆಲ ಸದಸ್ಯರು ಕುಡಿಯುವ ನೀರಿನ ಕಬ್ಬಿಣ ಕಳ್ಳತನ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದಾರೆ. ಅದರಂತೆ, ಯಲ್ಲಾಪುರ ಪಟ್ಟಣ ಪಂಚಾಯತ ಸದಸ್ಯರು ಜಾತ್ರೆ ಅವಧಿಯಲ್ಲಿನ ಅವ್ಯವಹಾರದಲ್ಲಿ ಸಿಕ್ಕಿ ಬೀಳುವ ಸಾಧ್ಯತೆ ಹೆಚ್ಚಿದೆ. `ಪಟ್ಟಣ ಪಂಚಾಯತದ ಕೆಲ ಸದಸ್ಯರ ಮುಂದಾಳತ್ವದಲ್ಲಿಯೇ ಜಾತ್ರೆ ಅವಧಿಯಲ್ಲಿ ಅಕ್ರಮ ನಡೆದಿದೆ’ ಎಂದು ಬಿಜೆಪಿ ಆರೋಪಿಸಿದೆ.
ಈ ಹಿಂದೆ ನಡೆದ ಗ್ರಾಮದೇವಿ ಜಾತ್ರೆ ಅವಧಿಯಲ್ಲಿ ಪಟ್ಟಣ ಪಂಚಾಯತ ನಡೆಸಿದ ಅಂಗಡಿ ಹರಾಜಿನಲ್ಲಿ 11 ಲಕ್ಷ ರೂ ಅವ್ಯವಹಾರವಾಗಿದೆ. `ಈ ಅಕ್ರಮದಲ್ಲಿ ಕೆಲವು ಸದಸ್ಯರೂ ಶಾಮೀಲಾಗಿದ್ದಾರೆ. ಆದರೆ ಕೇವಲ ಅಧಿಕಾರಿಗಳ ಮೇಲೆ ಮಾತ್ರ ಅವ್ಯವಹಾರದ ಹೊಣೆ ಹೊರಿಸಲಾಗುತ್ತಿದೆ’ ಎಂದು ಬಿಜೆಪಿ ಪ್ರಮುಖರು ಹೇಳಿದ್ದಾರೆ.
ಜಾತ್ರೆ ವಿಷಯದ ಅಕ್ರಮಗಳ ಬಗ್ಗೆ ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಗುರುವಾರ ಮೊದಲ ಬಾರಿ ಮಾತನಾಡಿದ್ದು ಪ್ರಕರಣದ ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ. `ಗ್ರಾಮದೇವಿ ಜಾತ್ರೆ ಈ ಕ್ಷೇತ್ರದ ಅಸ್ಮಿತೆ. ಹಿರಿಯರು ಅನಾಧಿಕಾಲದಿಂದ ಸಡಗರದಿಂದ ಜಾತ್ರೆ ನಡೆಸಿಕೊಂಡು ಬಂದಿದ್ದು, ಅಂಥ ಪ್ರಕ್ರಿಯೆಯಲ್ಲಿ ಹಗರಣ ನಡೆದಿರುವುದು ದುರದೃಷ್ಠ. ಈ ಕುರಿತು ಪಟ್ಟಣ ಪಂಚಾಯತ 8 ಬಾರಿ ಸಭೆ ನಡೆಸಿದ್ದು, ಶಾಸಕರು ಇದಕ್ಕೆ ಉತ್ತರ ಕೊಡುವಲ್ಲಿ ವಿಫಲರಾಗಿದ್ದಾರೆ’ ಎಂದು ಹೇಳಿದ್ದಾರೆ.
`ಜಾತ್ರಾ ಅಂಗಡಿ ಹರಾಜು ಅವ್ಯವಹಾರದ ಬಗ್ಗೆ ಸಮಗ್ರ ತನಿಖೆ ಆಗಬೇಕು. ಈ ಬಗ್ಗೆ ಶಾಸಕರು 15 ದಿನಗಳಲ್ಲಿ ಸ್ಪಷ್ಟನೆ ನೀಡಬೇಕು. ಇಲ್ಲದಿದ್ದರೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಅನಿವಾರ್ಯ’ ಎಂದು ಪ್ರಸಾದ ಹೆಗಡೆ ಎಚ್ಚರಿಸಿದರು. `ಶಾಸಕರ ಸಹಚರರಾದ ಕೆಲ ಸದಸ್ಯರು ಹರಾಜಿನಲ್ಲಿ ಭಾಗವಹಿಸಿ ಅಂಗಡಿ ಪಡೆದವರಿಂದ ಹಣ ಕಟ್ಟಿಸಿಕೊಂಡಿದ್ದಾರೆ. ಈ ವೇಳೆ ಅವ್ಯವಹಾರ ನಡೆದಿದೆ’ ಎಂದು ಪ ಪಂ ಸದಸ್ಯ ಸೋಮೇಶ್ವರ ನಾಯ್ಕ ದೂರಿದ್ದಾರೆ. `ಕೇವಲ ಅಧಿಕಾರಿಗಳ ಮೇಲೆ ಮಾತ್ರ ಅಲ್ಲ. ಹಗರಣದಲ್ಲಿ ಶಾಮೀಲಾಗಿರುವ ಸದಸ್ಯರ ಮೇಲೂ ಕ್ರಮ ಆಗಬೇಕು’ ಎಂದವರು ಒತ್ತಾಯಿಸಿದರು.
`ಕೊಳಚೆ ನಿರ್ಮೂಲನಾ ಮಂಡಳಿಯಿoದ ಮಂಜುನಾಥ ನಗರ ವಾರ್ಡಿನಲ್ಲಿ ಜಿ+2 ಮನೆಗಳ ನಿರ್ಮಾಣ ಆಗಿ ವರ್ಷ ಕಳೆದರೂ ವಿತರಣೆಯಾಗಿಲ್ಲ. ಕೊಳಚೆ ನಿರ್ಮೂಲನಾ ಮಂಡಳಿಯೇ ಜಿ ಪ್ಲಸ್ ಟು ಮನೆಯ ಪ್ರದೇಶದಲ್ಲಿ ಸಂಪೂರ್ಣ ಅಭಿವೃದ್ಧಿ ಮಾಡಬೇಕು. ಆದರೆ ಆ ಪ್ರದೇಶದಲ್ಲಿ ರಸ್ತೆ ನಿರ್ಮಾಣಕ್ಕೆ ಎಸ್‌ಸಿ ಎಸ್ ಟಿ ಅನುದಾನವನ್ನು ಬಳಸಲಾಗಿದೆ’ ಎಂದು ಪ್ರಸಾದ ಹೆಗಡೆ ದೂರಿದರು.
ಪ ಪಂ ಸದಸ್ಯೆ ಶ್ಯಾಮಿಲಿ ಪಾಟಣಕರ್, ಪ್ರಮುಖರಾದ ವಿನೋದ ತಳೆಕರ್, ರಜತ್ ಬದ್ದಿ, ರವಿ ದೇವಾಡಿಗ, ನಾಗೇಶ ಯಲ್ಲಾಪುರಕರ್ ಇತರರಿದ್ದರು.
Discussion about this post