ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಕೇಣಿಯಲ್ಲಿ ವಾಣಿಜ್ಯ ಬಂದರು ನಿರ್ಮಾಣವನ್ನು ಮೀನುಗಾರರು ವಿರೋಧಿಸುತ್ತಿದ್ದಾರೆ. ಈ ನಡುವೆ `ಬಂದರು ಯೋಜನೆ ಕೈ ಬಿಡಿ’ ಎಂದು ಹರಿಕಂತ್ರ ಕ್ಷೇಮಾಭಿವೃದ್ಧಿ ಸಂಘ ಮುಖ್ಯಮಂತ್ರಿಗೆ ಪತ್ರ ಬರೆದಿದೆ.
`ಕಾರವಾರ-ಅಂಕೋಲಾ ಭಾಗದಲ್ಲಿ ಸಾಕಷ್ಟು ಮೀನುಗಾರರು ಮೀನುಗಾರಿಕೆ ನಡೆಸುತ್ತಿದ್ದಾರೆ. ನೌಕಾನೆಲೆ ನಿರ್ಮಾಣಕ್ಕಾಗಿ ಸಾವಿರಾರು ಎಕರೆ ಭೂಮಿ ಹಾಗೂ ಕಡಲತೀರವನ್ನು ಸರ್ಕಾರ ಸ್ವಾಧೀನಪಡಿಸಿಕೊಂಡಿದೆ. ಇದರಿಂದ ಮೀನುಗಾರರಿಗೆ ಮೀನುಗಾರಿಕೆ ನಡೆಸಲು ಕಡಲತೀರಗಳ ಅಭಾವ ಎದುರಾಗಿದ್ದು, ಇದೀಗ ವಾಣಿಜ್ಯ ಬಂದರು ಹೆಸರಿನಲ್ಲಿ ಕೇಣಿ ಕಡಲತೀರವೂ ಕಣ್ಮರೆಯಾದರೆ ಇನ್ನಷ್ಟು ಸಮಸ್ಯೆ ಆಗಲಿದೆ’ ಎಂದು ಈ ಪತ್ರದಲ್ಲಿ ಬರೆದಿದ್ದಾರೆ.
`ಕಾರವಾರ ತಾಲೂಕಿನ ಬಿಣಗಾ, ಅರಗಾ, ಶಂಕ್ರುಬಾಗ್. ಅಲಿಗದ್ದಾ, ಚಂಡಿಯಾ, ಕೊಡಾರ ಸೇರಿದಂತೆ ಹತ್ತಾರು ಊರುಗಳ ಕಡಲ ತೀರ ನೌಕಾನೆಲೆಯ ವಶಕ್ಕೆ ಹೋಗಿದ್ದರಿಂದ ಮೀನುಗಾರರು ಅತಂತ್ರರಾಗಿದ್ದಾರೆ. ಇದೀಗ ಕೇಣಿ ಭಾಗದಲ್ಲಿ ಬೃಹತ್ ಬಂದರು ನಿರ್ಮಾಣ ಮಾಡಲು ಮುಂದಾಗಿದ್ದು ಇದಕ್ಕಾಗಿ JSW ಕಂಪನಿ ಈಗಾಗಲೇ ಸರ್ವೆ ಕೆಲಸ ಶುರು ಮಾಡಿದೆ. ಹೀಗಾಗಿ ಸರ್ಕಾರ ಬಡ ಮೀನುಗಾರರ ಪರ ಇದೆಯಾ? ಅಥವಾ ಬಂಡವಾಳಶಾಹಿಗಳ ಪರ ಇದೆಯಾ? ಎಂದು ತಿಳಿಯುತ್ತಿಲ್ಲ’ ಎಂದು ಪತ್ರದ ಮೂಲಕ ತಮ್ಮ ನೋವು ತೊಂಡಿಕೊ0ಡಿದ್ದಾರೆ. `ಕೇಣಿಯಲ್ಲಿ ಮೀನುಗಾರಿಕೆಯನ್ನೇ ನಂಬಿಕೊ0ಡು ನೂರಾರು ಜನ ಬದುಕುತ್ತಿದ್ದು, ಬಂದರು ನಿರ್ಮಾಣ ಆದರೆ ಕೇಣಿ ಜೊತೆ ಸುತ್ತಮುತ್ತಲಿನ ಹಲವಾರು ಗ್ರಾಮದ ಮೀನುಗಾರರಿಗೆ ಮೀನುಗಾರಿಕೆ ಮಾಡಲು ಸಮಸ್ಯೆ ಆಗಲಿದೆ’ ಎಂದು ವಿವರಿಸಿದ್ದಾರೆ.
`ಕೇಣಿಯಲ್ಲಿ ಬಂದರು ಆದರೆ ಉದ್ಯೋಗ ಸೃಷ್ಟಿಯಾಗಲಿದೆ ಎಂಬುದು ಸುಳ್ಳು. ಸಾಕಷ್ಟು ಬೃಹತ್ ಯೋಜನೆಗಳು ಜಿಲ್ಲೆಗೆ ಬಂದಿದ್ದು, ಅದರಿಂದ ಆದ ಅಭಿವೃದ್ಧಿ ಸಹ ಶೂನ್ಯ. ಬಂದರು ನಿರ್ಮಾಣದಿಂದ ಮೀನುಗಾರರ ಜೊತೆ ಇತರೆ ವರ್ಗದವರಿಗೂ ಸಮಸ್ಯೆ ಖಚಿತ’ ಎಂದು ಸಂಘಟನೆ ಗೌರವ ಅಧ್ಯಕ್ಷ ದಿಲೀಪ್ ಅರ್ಗೇಕರ್ ಹೇಳಿದ್ದಾರೆ. `ಜಿಲ್ಲೆಯ ಜನರು ಪದೇ ಪದೇ ಯೋಜನೆಗಳಿಗೆ ಭೂಮಿ ನೀಡಿ ನಿರಾಶ್ರಿತರಾಗಿದ್ದಾರೆ. ಈಗಾಗಲೇ ಹೊನ್ನಾವರ ಹಾಗೂ ಕಾರವಾರದಲ್ಲಿ ಬಂದರು ಮಾಡಲು ಮುಂದಾಗಿದ್ದು, ಕೇಣಿಯಲ್ಲೂ ಬೃಹತ್ ಬಂದರು ನಿರ್ಮಾಣ ಮಾಡಿದರೆ ಇಡೀ ಕಡಲ ತೀರಗಳು ನಾಶವಾಗಲಿದೆ’ ಎಂದು ಎಚ್ಚರಿಸಿದ್ದಾರೆ.
`ಸರ್ಕಾರ ಈ ಬಗ್ಗೆ ಗಮನಹರಿಸಿ ಕೂಡಲೇ ಕೇಣಿ ಬಂದರು ಯೋಜನೆಯನ್ನ ಕೈ ಬಿಡಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೇ ಮುಂದಿನ ದಿನದಲ್ಲಿ ನಿರಂತರ ಹೋರಾಟ ಹಾಗೂ ಕಾನೂನು ಹೋರಾಟ ನಿಶ್ಚಿತ’ ಎಂದು ಸಂಘಟನೆ ಜಿಲ್ಲಾಧ್ಯಕ್ಷರಾದ ರೋಷನ್ ಹರಿಕಂತ್ರ ಎಚ್ಚರಿಸಿದ್ದಾರೆ. ಪ್ರಮುಖರಾದ ಭರತ್ ಕಾರ್ವಿ, ಸುನಿಲ್ ತಾಂಡೇಲ್, ಪ್ರವೀಣ್ ತಾಂಡೇಲ್, ಕೃಷ್ಣ ತಾಂಡೇಲ್, ನಂದೀಶ್ ಮಜಾಳಿಕರ್, ಮೋಹನ್ ಉಳ್ಳೇಕರ್, ಕೃಷ್ಣ ಕಾಮು ಹರಿಕಂತ್ರ, ವಿನಾಯಕ ಚಂದ್ರಕಾAತ ಹರಿಕಂತ್ರ ಈ ಪತ್ರಕ್ಕೆ ಸಹಿ ಮಾಡಿ ಜಿಲ್ಲಾಡಳಿತಕ್ಕೆ ನೀಡಿದ್ದಾರೆ.
Discussion about this post