ಕೋಟು-ಕಚೇರಿ ಅಲೆದಾಟ ಅಸಾಧ್ಯವಾಗಿರುವ ವೃದ್ಧ ಮಹಿಳೆಯನ್ನು ಶಿರಸಿ ಉಪವಿಭಾಗಾಧಿಕಾರಿ ಕಾರಿನಲ್ಲಿಯೇ ಕೂರಿಸಿ ವಿಚಾರಣೆ ಮಾಡಿದ್ದಾರೆ. ವೃದ್ಧೆಯಿರುವ ಸ್ಥಳಕ್ಕೆ ತೆರಳಿ ಸಾಕ್ಷಿಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.
ಅಧಿಕಾರಿಗಳ ವಿರುದ್ಧದ ಆರೋಪ, ಕೌಂಟು0ಬಿಕ ಕಲಹ, ಭೂ ವಿವಾದ ಸೇರಿ ವಿವಿಧ ವಿಷಯಗಳ ಬಗ್ಗೆ ಉಪವಿಭಾಗಾಧಿಕಾರಿ ನ್ಯಾಯ ನಿರ್ಣಯ ನೀಡುತ್ತಾರೆ. ತಾಲೂಕು ದಂಡಾಧಿಕಾರಿಯಾಗಿರುವ ತಹಶೀಲ್ದಾರ್ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿದರೂ ಅದಕ್ಕೆ ಉಪವಿಭಾಗಾಧಿಕಾರಿ ನ್ಯಾಯ ನೀಡುತ್ತಾರೆ. ಹೀಗಿರುವಾಗ ಶುಕ್ರವಾರ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಪ್ರಕರಣವೊಂದರ ವಿಚಾರಣೆ ನಡೆದಿದ್ದು, ವೃದ್ಧೆಯೊಬ್ಬರ ಸಾಕ್ಷಿ ಅದಕ್ಕೆ ಅನಿವಾರ್ಯವಾಗಿತ್ತು. ಆದರೆ, ಆ ವೃದ್ಧೆ ಕಚೇರಿಗೆ ಬರುವ ಹಾಗಿರಲಿಲ್ಲ.
ವಿಚಾರಣೆ ವೇಳೆ ಉಪವಿಭಾಗಾಧಿಕಾರಿ ಕಾವ್ಯರಾಣಿ ಅವರು `ಸಾಕ್ಷಿದಾರರು ಎಲ್ಲಿದ್ದಾರೆ?’ ಎಂದು ಪ್ರಶ್ನಿಸಿದರು. ಕಚೇರಿ ಹೊರಗೆ ಅವರು ಕಾರಿನಲ್ಲಿ ಕೂತಿರುವ ಬಗ್ಗೆ ಅರಿತು ಅವರಿದ್ದ ಬಳಿಯೇ ಸಾಕ್ಷಿ ಸಂಗ್ರಹಕ್ಕೆ ತೆರಳಿದರು. ಈ ವೇಳೆ ಕಾರಿನಲ್ಲಿ ಕುಳಿತಿದ್ದ ವೃದ್ಧೆ ಉಪವಿಭಾಗಾಧಿಕಾರಿಗಳಿಗೆ ನಮಸ್ಕರಿಸಿದ್ದು, ಅದಾದ ನಂತರ ಅಲ್ಲಿಯೇ ಅವರ ಹೇಳಿಕೆಪಡೆದರು. ಅಗತ್ಯ ಕಾಗದಪತ್ರಗಳಿಗೆ ಸಹಿ ಮಾಡಿಸಿಕೊಂಡು ವೃದ್ಧೆಯ ಹೇಳಿಕೆಯನ್ನು ಕಡತದಲ್ಲಿ ದಾಖಲಿಸಿಕೊಂಡರು.
ಸಾಮಾನ್ಯವಾಗಿ ಎಲ್ಲಾ ದಂಡಾಧಿಕಾರಿಗಳು `ತಾವು ಇದ್ದ ಜಾಗಕ್ಕೆ ಬಂದು ಹೇಳಿಕೆ ನೀಡಬೇಕು’ ಎಂದು ತಾಕೀತು ಮಾಡುತ್ತಾರೆ. ಆದರೆ, ಕಾವ್ಯರಾಣಿ ಅವರು ವೃದ್ಧೆಯ ಅಸಹಾಯಕತೆ ಅರಿತು ಅವರಿದ್ದ ಬಳಿಯೇ ತೆರಳಿ ಪ್ರಕರಣದ ವಿಚಾರಣೆ ನಡೆಸಿದ್ದು ನೋಡುಗರಿಗೆ ವಿಶೇಷ ಎನಿಸಿತು.
Discussion about this post