ಮಂಗಳೂರು-ಸವದತ್ತಿ ಬಸ್ ಚಾಲಕ-ಸಿಬ್ಬಂದಿ ಬೈಕ್ ಸವಾರರ ವಿರುದ್ಧ ನೀಡಿದ ದೂರಿಗೆ ಪ್ರತಿಯಾಗಿ ಬೈಕ್ ಸವಾರರು ಸಹ ಸರ್ಕಾರಿ ಸಾರಿಗೆ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. `ಜೋರಾಗಿ ಬಂದ ಬಸ್ಸು ರಸ್ತೆಯಲ್ಲಿದ್ದ ನೀರನ್ನು ನಮ್ಮ ಮೇಲೆ ಹಾರಿಸಿದ್ದೇ ಹೊಡೆದಾಟಕ್ಕೆ ಕಾರಣ’ ಎಂದು ಬೈಕ್ ಸವಾರರು ಪೊಲೀಸ್ ದೂರಿನಲ್ಲಿ ವಿವರಿಸಿದ್ದಾರೆ.
ಜುಲೈ 29ರಂದು ಮಂಗಳೂರಿನಿoದ ಸವದತ್ತಿಗೆ ತೆರಳುತ್ತಿದ್ದ ಬಸ್ಸು ಹಾಗೂ ಅದೇ ಮಾರ್ಗವಾಗಿ ಸಂಚರಿಸುತ್ತಿದ್ದ ಬೈಕ್ ಸವಾರರ ನಡುವೆ ಹೊಡೆದಾಟ ನಡೆದಿತ್ತು. ಬಸ್ಸಿನ ಚಾಲಕ ಕರಿಯಪ್ಪ ಕೈನಾಕಟ್ಟಿ ಹಾಗೂ ನಿರ್ವಾಹಕ ಶಿವಾನಂದ ಬೆಳ್ಳಿಕೊಪ್ಪಿ ತಮ್ಮ ಮೇಲೆ ಹಲ್ಲೆ ನಡೆದಿದೆ ಎಂದು ದೂರಿದ್ದರು. `ಎಕ್ಕಂಬಿ ಚರ್ಚಿನ ಹತ್ತಿರ ಎರಡು ಬೈಕಿನಲ್ಲಿ ಬಂದ ಮೂರು ಜನ ಬಸ್ಸನ್ನು ಅಡ್ಡಗಟ್ಟಿದರು. ಅದಕ್ಕೂ ಮುನ್ನ ಆ ಮೂವರು ಬಸ್ಸಿಗೆ ದಾರಿ ಬಿಡದೇ ಅಡ್ಡಾದಿಡ್ಡಿ ಬೈಕ್ ಓಡಿಸುತ್ತಿದ್ದರು’ ಎಂದು ನಿವಾಹಕ ಶಿವಾನಂದ ಬೆಳ್ಳಿಕೊಪ್ಪಿ ಆರೋಪಿಸಿದ್ದರು.
ಮುಂಡಗೋಡು ಬೆಡಸಗಾಂವ್’ನ ಸಚಿನ ನಾಯ್ಕ, ಮಹೇಶ ನಾಯ್ಕ ಹಾಗೂ ಹರೀಶ ನಾಯ್ಕ ವಿರುದ್ಧ ಅವರು ಪೊಲೀಸ್ ದೂರು ನೀಡಿದ್ದರು. ಬಸ್ ನಿರ್ವಾಹಕ ನೀಡಿದ ದೂರಿನ ಅನ್ವಯ ಶಿರಸಿ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಶುರು ಮಾಡಿದ್ದರು. ಈ ನಡುವೆ ಅಗಸ್ಟ್ 1ರಂದು ಪೊಲೀಸ್ ಠಾಣೆಗೆ ಹಾಜರಾದ ಮುಂಡಗೋಡು ಬೆಡಸಗಾಂವ್’ನ ಸಚೀನ ನಾಯ್ಕ ಬಸ್ ಸಿಬ್ಬಂದಿ ಮಾಡಿದ ಲೋಪದ ಬಗ್ಗೆ ದೂರು ನೀಡಿದ್ದಾರೆ.
`ನಮ್ಮ ಹಿಂದೆ ಬರುತ್ತಿದ್ದ ಬಸ್ಸು ಜೋರಾಗಿ ಬಂದಿದ್ದು, ರಸ್ತೆ ಮೇಲಿದ್ದ ನೀರನ್ನು ಹಾರಿಸಿತು. ನಿಧಾನವಾಗಿ ಬಸ್ ಓಡಿಸು ಎಂದ ಕಾರಣಕ್ಕೆ ಬಸ್ ಚಾಲಕ-ನಿರ್ವಾಹಕರು ಜಗಳಕ್ಕೆ ಬಂದರು’ ಎಂದು ಸಚಿನ್ ನಾಯ್ಕ ಹೇಳಿದ್ದಾರೆ. `ಅಣ್ಣ ಹರೀಶ ನಾಯ್ಕ ಜೊತೆ ನನಗೂ ಬಸ್ ಸಿಬ್ಬಂದಿ ಹಲ್ಲೆ ಮಾಡಿದ್ದಾರೆ’ ಎಂದು ಸಚಿನ್ ನಾಯ್ಕ ದೂರು ನೀಡಿದ್ದಾರೆ. ಸದ್ಯ ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಎರಡು ಕಡೆಯವರ ಪ್ರಕರಣ ದಾಖಲಸಿಕೊಂಡು ತನಿಖೆ ಶುರು ಮಾಡಿದ್ದಾರೆ.
Discussion about this post