ಕುಮಟಾದ ಗಣೇಶ ಭಟ್ಟರ ಮನೆಯ ಬಾಗಿಲಿಗೆ ಬೆಂಕಿ ಹಚ್ಚಿದ ಕಳ್ಳರು ಅದಾದ ನಂತರ ಬಾಗಿಲು ಒಡೆದು ಒಳಗೆ ನುಗ್ಗಿದ್ದಾರೆ. ಮನೆಯಲ್ಲಿದ್ದ 3.76 ಲಕ್ಷ ರೂ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಕುಮಟಾದ ಕಲಕೇರಿ ವಾಲಗಳ್ಳಿಯಲ್ಲಿ ಗಣೇಶ ಭಟ್ಟ ಅವರು ಕುಟುಂಬದ ಜೊತೆ ವಾಸವಾಗಿದ್ದರು. ಜುಲೈ 31ರ ಮಧ್ಯಾಹ್ನದಿಂದ ಮರುದಿನ ಸಂಜೆಯವರೆಗೆ ಮನೆಯಲ್ಲಿ ಯಾರೂ ಇರಲಿಲ್ಲ. ಈ ವಿಷಯ ಅರಿತ ಕಳ್ಳರು ತಮ್ಮ ದುಷ್ಕೃತ್ಯ ಮೆರೆದಿದ್ದಾರೆ.
ಮನೆ ಹಿಂಬಾಗಲಿಗೆ ಬೆಂಕಿ ಹಚ್ಚಿದ ಕಳ್ಳರು ಅದಾದ ನಂತರ ಆ ಬಾಗಿಲನ್ನು ಒಡೆದಿದ್ದಾರೆ. ಗಣೇಶ ಭಟ್ಟ ಅವರ ತಂದೆಯವರ ಬೆಡ್ ರೂಂ ಪ್ರವೇಶಿಸಿ ಅಲ್ಲಿ ಎಲ್ಲಾ ಕಡೆ ಜಾಲಾಡಿದ್ದಾರೆ. ಕಪಾಟಿನ ಬಾಗಿಲನ್ನು ಒಡೆದು ಅಲ್ಲಿದ್ದ ಹಣ ಹಾಗೂ ಆಭರಣ ಎಗರಿಸಿದ್ದಾರೆ.
ಲಕ್ಷಾಂತರ ರೂ ಮೌಲ್ಯದ ಬಂಗಾರದ ಬಳೆ, ಮಾಂಗಲ್ಯ ಸರ, ಉಂಗುರು, ಜುಮಕಿ, ಕಿವಿಯ ರಿಂಗು ಕಳ್ಳರ ಪಾಲಾಗಿದೆ. ಜೊತೆಗೆ ಮನೆಯಲ್ಲಿದ್ದ 5500ರೂ ಹಣವನ್ನು ಕಳ್ಳರು ಅಪಹರಿಸಿದ್ದಾರೆ. ಅಗಸ್ಟ 1ರ ಸಂಜೆ 6.30ಕ್ಕೆ ಕುಟುಂಬದವರು ಮನೆಗೆ ಮರಳಿದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ.
ಕಳ್ಳತನ ನಡೆದ ಸಾಮಗ್ರಿಗಳನ್ನು ಪಟ್ಟಿ ಮಾಡಿದ ಮನೆ ಮಾಲಕಿ ಪೂನಂ ಗಣೇಶ ಭಟ್ಟ ಅವರು ಈ ಬಗ್ಗೆ ಪೊಲೀಸ್ ದೂರು ನೀಡಿದ್ದಾರೆ. ಕುಮಟಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕಳ್ಳರನ್ನು ಹಿಡಿಯುವ ವಿಶ್ವಾಸವ್ಯಕ್ತಪಡಿಸಿದ್ದಾರೆ.
Discussion about this post