76 ವರ್ಷದ ಗಣಪತಿ ನಾಯ್ಕ ಅವರು ನಿತ್ಯ 25-30ಕಿಮೀ ನಡೆಯುತ್ತಿದ್ದು, ಕಾಲ್ನಡಿಗೆಯಲ್ಲಿಯೇ ತಿರುಪತಿ ತಲುಪುವ ಸಂಕಲ್ಪ ಮಾಡಿದ್ದಾರೆ. ಈಗಾಗಲೇ 200 ಕಿಮೀ ಚಲಿಸಿರುವ ಅವರು ತಿರುಪತಿ ತಲುಪಲು ಇನ್ನೂ 600ಕಿಮೀ ನಡಿಗೆ ಮಾಡಬೇಕಿದೆ.
ಕುಮಟಾ ತಾಲೂಕಿನ ರಾಮೇಶ್ವರ ಬಳಿಯಿರುವ ಕಂಬಿಯ ಗ್ರಾಮದ ಗಣಪತಿ ನಾಯ್ಕ ಅವರಿಗೆ 76 ವರ್ಷ. ಕೃಷಿ ಅಧಿಕಾರಿಯಾಗಿದ್ದ ಅವರು ತಮ್ಮ ನಿವೃತ್ತಿ ನಂತರ ವಿಶ್ರಾಂತಿಪಡೆಯಲಿಲ್ಲ. ಬದಲಾಗಿ ದೇವರ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅಪಾರ ದೈವಭಕ್ತರಾದ ಅವರು ತಾಲೂಕಿನ ಎಲ್ಲಾ ದೇವಾಲಯಗಳಿಗೆ ನಡೆದುಕೊಳ್ಳಲು ಶುರು ಮಾಡಿದರು. ತಮ್ಮಲ್ಲಿನ ದೈವಭಕ್ತಿಯನ್ನು ಇತರರಲ್ಲಿ ಹೇಳಿಕೊಂಡು ಅವರನ್ನು ಆಧಾತ್ಮದ ಕಡೆ ಒಲವು ತೋರುವಂತೆ ಮಾಡಿದರು.
ಸದ್ಯ ಗಣಪತಿ ನಾಯ್ಕ ಅವರು ಕುಮಟಾದಿಂದ ತಿರುಪತಿ ತಿರುಮಲಕ್ಕೆ 800 ಕಿಲೋಮೀಟರ್ ಪಾದಯಾತ್ರೆ ಶುರು ಮಾಡಿದ್ದಾರೆ. ಜುಲೈ 25ರಂದು ಕುಮಟಾದಿಂದ ಹೊರಟ ಅವರು ಆಶ್ರಯ ಸಿಕ್ಕಕಡೆ ಉಟ-ವಸತಿ ಮುಗಿಸಿ ಮುಂದಿನ ಪ್ರಯಾಣ ಮಾಡುತ್ತಿದ್ದಾರೆ. ಈ ಹಿಂದೆ ಸಲ ಅವರು ಅನೇಕ ಪಾದಯಾತ್ರೆ ಮಾಡಿದ್ದು, ಅದೇ ಅನುಭವದ ಆಧಾರದಲ್ಲಿ ತಿರುಪತಿಗೆ ಹೊರಟಿದ್ದಾರೆ.
ಈ ಹಿಂದೆಯೂ ಒಮ್ಮೆ ಕಾಲ್ನಡಿಗೆ ಮೂಲಕ ಅವರು ತಿರುಪತಿಗೆ ಹೋಗಿದ್ದರು. ವೆಂಕಟೇಶ್ವರ ದೇವರ ದರ್ಶನಪಡೆದು ಮರಳಿದ್ದರು. ಅದೇ ಉತ್ಸಾಹದಲ್ಲಿ ಇದೀಗ ಮತ್ತೊಮ್ಮೆ ಯಾತ್ರೆ ಶುರು ಮಾಡಿದ್ದಾರೆ. ಸರಳ ಆಹಾರ, ಅಗತ್ಯ ವಿಶ್ರಾಂತಿ ಜೊತೆ ಅವರು ಪಾದಯಾತ್ರೆ ನಡೆಸುತ್ತಿದ್ದಾರೆ. ತಮ್ಮೊಳಗಿನ ದೈವ ಭಕ್ತಿಯೇ ಆರೋಗ್ಯದ ರಹಸ್ಯ ಎಂದು ಅವರು ನಂಬಿದ್ದಾರೆ.
Discussion about this post