ಬಾಬು ಸಿದ್ದಿ ಅವರ ಮನೆ ಅಂಗಳದಲ್ಲಿದ್ದ ನಾಯಿಯನ್ನು ಹುಸೇನ ಕೆರೆಹೊಸಳ್ಳಿ ಕದಿಯುತ್ತಿದ್ದಾಗ ಸಿಕ್ಕಿ ಬಿದ್ದಿದ್ದು, ಇದನ್ನು ಪ್ರಶ್ನಿಸಿದ ಕಾರಣ ಅವರಿಬ್ಬರ ನಡುವೆ ಹೊಡೆದಾಟ ನಡೆದಿದೆ.
ಯಲ್ಲಾಪುರದ ಹಾಸಣಗಿ ಕಾಳಂಜಿಕೊಪ್ಪದಲ್ಲಿ ಬಾಬು ರುಜಾಯ್ ಸಿದ್ದಿ (65) ಅವರು ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಅವರು ತಮ್ಮ ಮನೆ ಭದ್ರತೆಗಾಗಿ ನಾಯಿ ಸಾಕಿದ್ದು, ಅದನ್ನು ಪ್ರೀತಿಯಿಂದ ಬೆಳಸುತ್ತಿದ್ದಾರೆ. ಆದರೆ, ಜುಲೈ 7ರ ರಾತ್ರಿ 9 ಗಂಟೆಗೆ ಆ ನಾಯಿಯ ಅಪಹರಣ ಪ್ರಯತ್ನ ನಡೆದಿದೆ.
ರಾತ್ರಿ ನಾಯಿ ಬೊಗಳುವುದನ್ನು ಕಂಡು ಮನೆಯಿಂದ ಹೊರ ಬಂದ ಬಾಬು ಸಿದ್ದಿ ಅವರಿಗೆ ಅಲ್ಲಿ ಹುಸೇನ ಕೆರೆಹೊಸಳ್ಳಿ ಎದುರಾಗಿದ್ದಾರೆ. ಹುಸೇನ್ ನಾಯಿ ಕರೆದುಕೊಂಡು ಹೋಗುತ್ತಿರುವುದನ್ನು ಬಾಬು ಸಿದ್ದಿ ತಡೆದಿದ್ದಾರೆ. ಈ ವೇಳೆ ಅವರಿಬ್ಬರ ನಡುವೆ ಮಾತಿಗೆ ಮಾತು ಬೆಳೆದಿದ್ದು, ಜಗಳವಾಗಿದೆ.
`ನೀನು ಯಾಕೆ ನಾಯಿ ತೆಗೆದುಕೊಂಡು ಹೋಗುತ್ತಿಯಾ?’ ಎಂದು ಬಾಬು ಸಿದ್ದಿ ಜೋರಾಗಿ ಪ್ರಶ್ನಿಸಿದ್ದಾರೆ. ಅದಕ್ಕೆ ಹುಸೇನ್ ಸರಿಯಾಗಿ ಉತ್ತರಿಸದೇ ಇದ್ದಾಗ ಬಾಬು ಸಿದ್ದಿ ಇನ್ನಷ್ಟು ಜೋರಾಗಿದ್ದಾರೆ. ಆಗ, ಹುಸೇನ್ ಕೆರೆಹೊಸಳ್ಳಿ ಬಾಬು ಸಿದ್ದಿ ಅವರನ್ನು ಕೈಯಿಂದ ದೂಡಿ ಕೆಟ್ಟದಾಗಿ ಬೈದಿದ್ದಾರೆ. ಹುಸೇನ್ ಕೆರೆಹೊಸಳ್ಳಿ ದೂಡಿದ ರಭಸಕ್ಕೆ ಬಾಬು ಸಿದ್ದಿ ನೆಲಕ್ಕೆ ಬಿದ್ದಿದ್ದು, ಎರಡು ಕಾಲುಗಳಿಗೆ ಪೆಟ್ಟಾಗಿದೆ.
ಅದಾದ ನಂತರ ಹುಸೇನ್ ಕೆರೆಹೊಸಳ್ಳಿ ಅಲ್ಲಿಂದ ಓಡಿ ಪರಾರಿಯಾಗಿದ್ದಾರೆ. ಈ ಬಗ್ಗೆ ಬಾಬು ಸಿದ್ದಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ನಂತರ ನ್ಯಾಯಾಲಯದ ಮೊರೆ ಹೋಗಿ ಹುಸೇನ್ ಕೆರೆಹೊಸಳ್ಳಿ ವಿರುದ್ಧ ಪ್ರಕರಣ ದಾಖಲಿಸಲು ವಿನಂತಿಸಿದ್ದಾರೆ. ಈ ಹಿನ್ನಲೆ ಯಲ್ಲಾಪುರ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಶುರು ಮಾಡಿದ್ದಾರೆ.
Discussion about this post