ಕಾರವಾರ ನಂದನಗದ್ದಾದಲ್ಲಿ ದೇವರಿಗೆ ಹಚ್ಚಿದ ದೀಪ ಇಡೀ ಮನೆ ಸುಟ್ಟಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ಆರಿಸಲು ಹರಸಾಹಸ ಮಾಡಿದ್ದಾರೆ.
ಕಾರವಾರ ನಗರದ ನಂದನಗದ್ದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಬಳಿ ಬಾಳಾ ನಾಯ್ಕ ಅವರ ಹಂಚಿನ ಮನೆ ಸುಟ್ಟು ಕರಕಲಾಗಿದೆ. ಶನಿವಾರ ಸಂಜೆ ಈ ದುರ್ಘಟನೆ ನಡೆದಿದ್ದು, ಈ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ. ಸಂಜೆ ದೇವರಿಗೆ ದೀಪ ಹಚ್ಚಿದ ಕುಟುಂಬದವರು ಮನೆಗೆ ಬೀಗ ಹಾಕಿ ಮಾರುಕಟ್ಟೆಗೆ ಹೋಗಿದ್ದರು. ಮರಳಿ ಬರುವಷ್ಟರಲ್ಲಿ ಮನೆ ಹೊತ್ತಿ ಉರಿಯುತ್ತಿತ್ತು.
ಮನೆಗೆ ಬೆಂಕಿ ತಗುಲಿರುವುದು ಕಂಡು ಗಾಬರಿಗೆ ಬಿದ್ದ ಅವರು ಕೂಡಲೇ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದರು. ಬೆಂಕಿಯ ಪ್ರಮಾಣ ಹೆಚ್ಚಾಗಿದ್ದರಿಂದ ಬೆಂಕಿ ನಂದಿಸಲು ಹೆಚ್ಚುವರಿಯಾಗಿ ಎರಡು ಟ್ಯಾಂಕರ್ ನೀರನ್ನು ಬಳಸಬೇಕಾಯಿತು.
ಮೊದಲು ಸಿಲೆಂಡರ್ ಸ್ಪೋಟದಿಂದ ಬೆಂಕಿ ಹತ್ತಿದ ಬಗ್ಗೆ ಊಹಿಸಲಾಗಿತ್ತು. ನಂತರ ದೇವರಿಗೆ ಹಚ್ಚಿದ ದೀಪ ಮನೆಗೆ ಆವರಿಸಿರುವುದು ಗೊತ್ತಾಯಿತು. ಮನೆಯೊಳಗಿದ್ದ ಸಾಮಗ್ರಿಗಳು ಸುಟ್ಟು ಕರಕಲಾಗಿವೆ.
Discussion about this post