ದಾಂಡೇಲಿಯ ಜನ ಚಿಕ್ಕ ಮಕ್ಕಳನ್ನು ಮನೆಯಿಂದ ಹೊರ ಕಳುಹಿಸಲು ಹೆದರುತ್ತಿದ್ದಾರೆ. ಕಾರಣ ನಗರದಲ್ಲಿ ಬೀದಿ ನಾಯಿಗಳ ಉಪಟಳ ಹೆಚ್ಚಾಗಿದೆ.
ಶನಿವಾರ ಶಾಲೆ ಮುಗಿಸಿ ಮನೆಗೆ ಬರುತ್ತಿದ್ದ ಮಗುವಿನ ಮೇಲೆ ಬೀದಿ ನಾಯಿ ದಾಳಿ ನಡೆಸಿದೆ. ಗಾಂಧೀನಗರದ ಸುಶಾಂತ ಎಂಬ ಬಾಲಕ ಬೀದಿ ನಾಯಿ ದಾಳಿಗೆ ತತ್ತರಿಸಿದ್ದು, ನಾಯಿ ಎಗರಿ ಬಂದಿದನ್ನು ನೋಡಿದ ಜನ ಬಾಲಕನನ್ನು ರಕ್ಷಿಸಿದ್ದಾರೆ. ನಗರದ ಎಲ್ಲೆಂದರಲ್ಲಿ ಕಜ್ಜಿ ನಾಯಿಗಳಿದ್ದರೂ ಅದನ್ನು ನಿಯಂತ್ರಿಸದ ಸ್ಥಳೀಯ ಆಡಳಿತದ ವಿರುದ್ಧ ಜನ ಕಿಡಿಕಾರಿದ್ದಾರೆ.
ಗಾಂಧಿನಗರದ ಸರಕಾರಿ ಕನ್ನಡ ಮಾಧ್ಯಮ ಶಾಲೆಯ ಎರಡನೇ ತರಗತಿಯಲ್ಲಿ ಸುಶಾಂತ್ ಓದುತ್ತಿದ್ದರು. ಶಾಲೆ ಮುಗಿಸಿ ಮನೆಗೆ ಬರುವಾಗ ಅವರನ್ನು ಬೀದಿ ನಾಯಿ ಬೆನ್ನಟ್ಟಿ ಬಂದಿತು. ತಪ್ಪಿಸಿಕೊಳ್ಳುವಷ್ಟರಲ್ಲಿ ಆ ನಾಯಿ ಕಾಲಿಗೆ ಬಾಯಿ ಹಾಕಿತು.
ಅನತಿ ದೂರದಲ್ಲಿದ್ದ ಜನ ಈ ಆಕ್ರಮಣ ನೋಡಿದ್ದು, ತಕ್ಷಣ ದೊಣ್ಣೆ ಹಿಡಿದು ನಾಯಿಯನ್ನು ಹೆದರಿಸಿದರು. ಅಳುತ್ತಿದ್ದ ಸುಶಾಂತ ಅವರನ್ನು ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ರವಾನಿಸಿದರು.
ನಾಯಿ ಆಕ್ರಮಣದಿಂದ ನೋವು ಅನುಭವಿಸಿದ ಶುಶಾಂತ ಅವರಿಗೆ ಚುಚ್ಚುಮದ್ದು ನೀಡಲಾಗಿದೆ. ವೈದ್ಯರ ಅಭಿಪ್ರಾಯದಂತೆ ರೇಬಿಸ್ ರೋಗ ಹರಡದಂತೆ ತಡೆಯಲು ನಾಯಿ ದಾಳಿಗೆ ಒಳಗಾದವರಿಗೆ ಇನ್ನಷ್ಟು ಚುಚ್ಚುಮದ್ದು ಅನಿವಾರ್ಯವಾಗಿದೆ.
ನಗರದ ಬಹುತೇಕ ಕಡೆ ಬೀದಿನಾಯಿಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದರೂ ಸ್ಥಳೀಯ ಆಡಳಿತ ಆ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಬೀದಿ ನಾಯಿ ನಿಯಂತ್ರಣಕ್ಕೆ ಅಗತ್ಯ ಕ್ರಮ ಜರುಗಿಸಬೇಕು ಎಂದು ಜನ ಆಗ್ರಹಿಸಿದ್ದಾರೆ.
Discussion about this post