ಕಾರವಾರದ ನಂದನಗದ್ದಾ ಬಾಡದಲ್ಲಿರುವ ಮಹಾದೇವ ವಿನಾಯಕ ದೇವಸ್ಥಾನಕ್ಕೆ ಉತ್ತರ ಕನ್ನಡ ಜಿಲ್ಲಾಡಳಿತ ನೂತನ ವ್ಯವಸ್ಥಾಪನಾ ಸಮಿತಿ ರಚಿಸಿದೆ. 23 ಅರ್ಜಿಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಅಂತಿಮವಾಗಿ 9 ಜನರನ್ನು ಈ ಸಮಿತಿಗೆ ಆಯ್ಕೆ ಮಾಡಿದ್ದಾರೆ.
ವ್ಯಕ್ತಿಯ ವೈಯಕ್ತಿಕ ಹಿನ್ನಲೆ, ಸೇವಾ ಮನೋಭಾವನೆ, ಧಾರ್ಮಿಕ ಚಟುವಟಿಕೆಗಳಲ್ಲಿನ ಉತ್ಸಾಹಗಳನ್ನು ಪರಿಗಣಿಸಿ ಸಮಿತಿಗೆ ಸದಸ್ಯರ ನೇಮಕಾತಿ ನಡೆದಿದೆ. ಗುನಗಿವಾಡದ ಅರವಿಂದ ಮಾರುತಿ ಗುನಗಿ, ಕಳಸವಾಡದ ದೀಪಕ ನಾಯ್ಕ, ತೆಲಂಗ ರಸ್ತೆಯ ಸದಾನಂದ ಬಾಂದೇಕರ್, ಬಾಂಡಿಶೆಟ್ಟಾದ ಶಶಿಕಾಂತ ನಾಯ್ಕ, ಕೋಡಿಭಾಗದ ಶಿವಾನಂದ ನಾಯ್ಕ ಅವರು ಈ ಸಮಿತಿಯಲ್ಲಿದ್ದಾರೆ.
ಪರಿಶಿಷ್ಟ ಜಾತಿ ಮೀಸಲಾತಿ ಅಡಿ ಬಾಡದ ಗುರುದತ್ತ ಬಂಟ ಅವರನ್ನು ಜಿಲ್ಲಾಡಳಿತ ಸಮಿತಿಗೆ ನೇಮಿಸಿದೆ. ಮಹಿಳಾ ಮೀಸಲಾತಿ ಅಡಿ ಗುನಗಿವಾಡದ ಭಾರತಿ ಗುನಗಿ ಹಾಗೂ ಹಬ್ಬುವಾಡದ ಸುಜಾತಾ ಮಡಿವಾಳ ಅವರು ಸಮಿತಿ ಸದಸ್ಯರಾಗಿದ್ದಾರೆ. ದೇವಾಲಯದ ಅರ್ಚಕರು ಸಹ ಈ ಸಮಿತಿಯಲ್ಲಿರಲಿದ್ದಾರೆ.
ಜುಲೈ 31ರಂದು ಜಿಲ್ಲಾಧಿಕಾರಿ ಈ ಕಡತಕ್ಕೆ ಸಹಿ ಹಾಕಿದ್ದು, ಮುಂದಿನ ಮೂರು ವರ್ಷಗಳವರೆಗೆ ಈ ಎಲ್ಲ ಸದಸ್ಯರಿಗೂ ದೇವರ ಸೇವೆಗೆ ಅವಕಾಶ ಸಿಕ್ಕಿದೆ. ‘ಈ 9 ಸದಸ್ಯರು ಸೇರಿ ಮೊದಲ ಸಭೆಯಲ್ಲಿ ಅಧ್ಯಕ್ಷರ ಆಯ್ಕೆ ನಡೆಸಬೇಕು. ದೇವಾಲಯದಲ್ಲಿ ಹಿಂದಿನಿಂದ ನಡೆದುಕೊಂಡು ಬಂದ ಸಂಪ್ರದಾಯವನ್ನು ಪಾಲಿಸಬೇಕು’ ಎಂದು ಜಿಲ್ಲಾಧಿಕಾರಿಗಳು ಹೊರಡಿಸಿದ ಆದೇಶದಲ್ಲಿ ಉಲ್ಲೆಖಿಸಲಾಗಿದೆ.
ಇದರೊಂದಿಗೆ ದೇಗುಲದಲ್ಲಿನ ಧಾರ್ಮಿಕ ಸೇವೆಗೆ ಶುಲ್ಕ ನಿಗದಿ ಹಾಗೂ ಅಭಿವೃದ್ಧಿ ವಿಷಯವಾಗಿ ನಿರ್ಣಯ ಕೈಗೊಳ್ಳಲು ಈ ಸಮಿತಿಗೆ ಸ್ವತಂತ್ರ್ಯ ನೀಡಲಾಗಿದೆ.
Discussion about this post