ಶಿರಸಿಯ ಚಾಲಕ ದೇವೇಂದ್ರ ಪಡ್ತಿ ಕಳೆನಾಶಕ ಸೇವಿಸಿ ಸಾವನಪ್ಪಿದ್ದಾರೆ. ಈ ಹಿಂದೆ ಎರಡು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಅವರು ಆ ವೇಳೆ ವಿಫಲರಾಗಿದ್ದು, ಮೂರನೇ ಬಾರಿ ವಿಷ ಸೇವಿಸಿ ಪ್ರಾಣ ಬಿಟ್ಟಿದ್ದಾರೆ.
ಶಿರಸಿಯ ಲಂಡಕನಳ್ಳಿಯಲ್ಲಿ ದೇವೇಂದ್ರ ಪಡ್ತಿ (52) ವಾಸವಾಗಿದ್ದರು. ಚಾಲಕರಾಗಿದ್ದ ಅವರು ತಮ್ಮ ದುಡಿಮೆಯ ಬಹುಪಾಲು ಹಣವನ್ನು ಸರಾಯಿ ಅಂಗಡಿಗೆ ಕೊಡುತ್ತಿದ್ದರು. ಜೀವನದಲ್ಲಿ ಜಿಗುಪ್ಸೆ ಹೊಂದಿದ ಅವರು ಈ ಮೊದಲು ಆತ್ಮಹತ್ಯೆಯ ನಿರ್ಧಾರ ಮಾಡಿದ್ದರು. ಆದರೆ, ಅದು ಫಲಿಸಿರಲಿಲ್ಲ.
ದೇವೇಂದ್ರ ಪಡ್ತಿ ಅವರ ಪತ್ನಿ ಉಷಾ ಪಡ್ತಿ ಅವರು ಬೆಂಗಳೂರಿಗೆ ಹೋಗಿದ್ದರು. ಮನೆಯಲ್ಲಿ ಒಬ್ಬರೇ ಇದ್ದ ಅವರು ಈ ಬಾರಿ ಮತ್ತೊಮ್ಮೆ ಆತ್ಮಹತ್ಯೆ ಪ್ರಯತ್ನ ಮಾಡಿದರು. ಕಳೆ ನಾಶಕ ಸೇವಿಸಿದ ನಂತರ ತಮ್ಮ ಅತ್ತೆಗೆ ಫೋನ್ ಮಾಡಿದ ದೇವೇಂದ್ರ ಪಡ್ತಿ `ನೀರು ಕುಡಿಯಲು ಸಹ ಆಗುತ್ತಿಲ್ಲ. ಮನೆಯಲ್ಲಿದ್ದ ನಾಯಿಗೂ ಅನ್ನ ಹಾಕುವವರಿಲ್ಲ’ ಎಂದು ಅವಲತ್ತುಕೊಂಡಿದ್ದರು.
`ನನ್ನ ಪುಟ್ಟುವನ್ನು ಮನೆಗೆ ಬರಲು ತಿಳಿಸಿ’ ಎಂದು ಅತ್ತೆಯ ಮೂಲಕ ಪತ್ನಿಗೆ ಫೋನ್ ಮಾಡಿಸಿದ್ದರು. ತಾಯಿ ಮಾತು ಕೇಳಿ ಅಗಸ್ಟ್ 2ರ ರಾತ್ರಿ ಬೆಂಗಳೂರಿನಿoದ ಶಿರಸಿ ಬಸ್ ಹತ್ತಿದ ಉಷಾ ಪಡ್ತಿ ಅವರು ಬೆಳಗ್ಗೆ ಊರಿಗೆ ತಲುಪಿದರು. ಮನೆಗೆ ಬಂದಾಗ ಅರ್ದ ಬಾಗಿಲು ತೆರೆದಿತ್ತು. ಒಳಗೆ ಹೋಗಿ ನೋಡಿದಾಗ ಅಲ್ಲಿ ಚಾಪೆ ಮೇಲೆ ದೇವೇಂದ್ರ ಪಡ್ತಿ ಮಲಗಿದ್ದರು.
ಉಷಾ ಪಡ್ತಿ ಅವರು ಪತಿಯನ್ನು ಮಾತನಾಡಿಸಲು ಪ್ರಯತ್ನಿಸಿದರು. ಆದರೆ, ಅವರು ಮಾತನಾಡಲಿಲ್ಲ. ದೇವೇಂದ್ರ ಪಡ್ತಿ ಅವರ ಬಾಯಿಂದ ಕೆಟ್ಟ ವಾಸನೆ ಬರುತ್ತಿದ್ದು, ಪಕ್ಕದಲ್ಲಿ ಕ್ರಿಮಿನಾಶಕದ ಬಾಟಲಿ ಬಿದ್ದಿತ್ತು. ಉಷಾ ಪಡ್ತಿ ಅವರು ತಮ್ಮ ಕೈ ಬೆರಳನ್ನು ಪತಿಯ ಮೂಗಿನ ಬಳಿ ಹಿಡಿದಾಗ ದೇವೇಂದ್ರ ಪಡ್ತಿ ಸಾವನಪ್ಪಿರುವುದು ಅರಿವಾಯಿತು.
ಶಿರಸಿ ಗ್ರಾಮೀಣ ಠಾಣೆಗೆ ಬಂದ ಉಷಾ ಪಡ್ತಿ ಅವರು ನಡೆದ ವಿದ್ಯಮಾನಗಳ ಬಗ್ಗೆ ವಿವರಿಸಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡರು.
Discussion about this post