ಶಿರಸಿಯ ಬನವಾಸಿ ಬಳಿಯ ಕಪ್ಪಗಡ್ಡೆ ಮತ್ತು ವದ್ದಲ ಗ್ರಾಮ ಸಂಪರ್ಕ ರಸ್ತೆ ನಕ್ಷೆಗೆ ಮಾತ್ರ ಸೀಮಿತವಾಗಿದೆ. ದಾಖಲೆಗಳಲ್ಲಿ ರಸ್ತೆಯಿದ್ದರೂ ಸಾರ್ವಜನಿಕ ಬಳಕೆಗೆ ಅದು ಲಭ್ಯವಿಲ್ಲ!
ಕಪ್ಪಗಡ್ಡೆ ಮತ್ತು ವದ್ದಲ ಗ್ರಾಮ ಸಂಪರ್ಕಿಸುವ ರಸ್ತೆ ಅತಿಕ್ರಮಣವಾಗಿದೆ. ಅತಿಕ್ರಮಣ ತೆರವು ಮಾಡುವಂತೆ ಅಲ್ಲಿನ ಜನ ಸ್ಥಳೀಯ ಆಡಳಿತದಿಂದ ಹಿಡಿದು ಸಚಿವರವರೆಗೆ ಮನವಿ ಸಲ್ಲಿಸಿದರೂ ಯಾವ ಪ್ರಯೋಜನವೂ ಆಗಿಲ್ಲ. ರಸ್ತೆ ಅತಿಕ್ರಮಣದಿಂದಾಗಿ ಆ ಭಾಗದ ರೈತರು, ವಿದ್ಯಾರ್ಥಿಗಳು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ.
ಈ ಅತಿಕ್ರಮಣದಿಂದಾಗಿ ಕೃಷಿಕರಿಗೆ ತಮ್ಮ ಹೊಲಕ್ಕೆ ಹೋಗಲು ದಾರಿ ಇಲ್ಲ. ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜಿಗೆ ಹೋಗಲು ಸರಿಯಾದ ಮಾರ್ಗವಿಲ್ಲ. ಅನೇಕ ಮನೆಗಳಿಗೆ ತೆರಳಲು ರಸ್ತೆಯೇ ಇಲ್ಲ. ಕೃಷಿ ಜಮೀನುಗಳಿಗೆ ಅಗತ್ಯ ಯಂತ್ರೋಪಕರಣಗಳನ್ನು ಸಾಗಿಸಲು ರೈತರಿಗೆ ಕಷ್ಟವಾಗಿದೆ. ಅನಾರೋಗ್ಯ ಪೀಡಿತರನ್ನು ಆಸ್ಪತ್ರೆಗೆ ಕರೆದೊಯ್ಯಲು ಜೋಳಿಗೆ ಕಟ್ಟಿ ಹೊರುವ ಸ್ಥಿತಿಯಿದೆ.
ರಸ್ತೆ ಅತಿಕ್ರಮಣ ತೆರವು ಆಗದ ಕಾರಣ ಸ್ಥಳೀಯರು ಸಾಮಾಜಿಕವಾಗಿ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ರಸ್ತೆ ಒತ್ತುವರಿ ತೆರವುಗೊಳಿಸಿ ಸಂಪರ್ಕ ಕಲ್ಪಿಸುವಂತೆ ಅಲ್ಲಿನ ಜನ ಹಲವು ವರ್ಷಗಳಿಂದ ತಹಶೀಲ್ದಾರ್, ಸಹಾಯಕ ಆಯುಕ್ತರು, ಜಿಲ್ಲಾಧಿಕಾರಿಗಳು ಮತ್ತು ಕ್ಷೇತ್ರದ ಶಾಸಕರಿಗೆ ಮನವಿ ಸಲ್ಲಿಸುತ್ತಿದ್ದಾರೆ. ಆದರೆ, ಅಧಿಕಾರಿಗಳು ವಿವಿಧ ಕಾರಣ ನೀಡಿ ತೆರವು ಕಾರ್ಯಾಚರಣೆಯಿಂದ ದೂರವುಳಿದಿದ್ದಾರೆ.
ಪ್ರತಿ ಭೂಮಿಗೂ ರಸ್ತೆ ಕಲ್ಪಿಸುವಂತೆ ಸರ್ಕಾರದ ಆದೇಶವಿದ್ದರೂ ಆ ಆದೇಶ ಇಲ್ಲಿ ಪಾಲನೆ ಆಗಿಲ್ಲ. ನಕ್ಷೆಯಲ್ಲಿ ಕಾಲುದಾರಿ, ಬಂಡಿದಾರಿ ಬಗ್ಗೆ ನಮೂದಾಗಿದ್ದರೂ ಅತಿಕ್ರಮಣ ಖುಲ್ಲಾಪಡಿಸಲು ಅಧಿಕಾರಿಗಳು ಆಸಕ್ತಿವಹಿಸಿಲ್ಲ. ಹೀಗಾಗಿ ಸಂತ್ರಸ್ತ ಜನ ಇದೀಗ ಕಂದಾಯ ಸಚಿವರಿಗೆ ಈ ಬಗ್ಗೆ ಪತ್ರ ಬರೆದಿದ್ದಾರೆ. ತಮ್ಮ ಸಮಸ್ಯೆ ಬಗೆಹರಿಸಿ ಎಂದು ಅಳಲು ತೋಡಿಕೊಂಡಿದ್ದಾರೆ.
Discussion about this post